ವಿಜಯವಾಣಿ ಸುದ್ದಿಜಾಲ ಕಡಬ
ಹಿಂದು ಸಮಾಜ ಸದೃಢವಾಗಿರಲು ಭಜನಾ ಮಂದಿರದ ಕೊಡುಗೆ ಅಪಾರ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾ ಕಚೇರಿ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಸಭೆ ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನ, ಭಜನಾ ಮಂದಿರಗಳು ಹಿಂದು ಧರ್ಮದ ಭದ್ರ ಬುನಾದಿಯಾಗಿವೆ. ಈ ಎರಡು ಶ್ರದ್ಧಾ ಕೇಂದ್ರಗಳನ್ನು ಉತ್ತಮವಾಗಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಭಜನೆ ಸಂಸ್ಕೃತಿ ಸಂಸ್ಕಾರಗಳನ್ನು ಮೂಡಿಸಿ ಸರಳ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳುವ ಸುಲಭ ವಿಧಾನ ಎಂದರು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಓಗ್ಗು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸದಾನಂದ ಆಚಾರ್ಯ, ರಾಜ್ಯ ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್, ಮರ್ದಾಳ ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯ ಸತ್ಯನಾರಾಯಣ ಹೆಗ್ಡೆ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ಎನ್.ಪ್ರಾಸ್ತಾವಿಸಿ ಸ್ವಾಗತಿಸಿದರು. ನೆಲ್ಯಾಡಿ ವಲಯದ ಮೇಲ್ವಿಚಾರಕ ಆನಂದ್ ಡಿ.ಬಿ. ವಂದಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ನಿರೂಪಿಸಿದರು.