ಹಿಂದೂ 'ಅಶ್ಲೀಲ' ಪದ ಹೇಳಿಕೆ; ಸಚಿವ ಸತೀಶ್ ಜಾರಕಿಹೊಳಿಗೆ ಕೋರ್ಟ್‌ ಸಮನ್ಸ್​​

satish jarakiholi
Published on

ಬೆಂಗಳೂರು:  ಹಿಂದೂ ಧರ್ಮದ‌ ಕುರಿತ ಕಾಂಗ್ರೆಸ್‌ ಸಚಿವ ಸತೀಶ್ ಜಾರಕಿಹೊಳಿ ಅವರ ವಿವಾದಿತ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೂ ಧರ್ಮದ‌ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೂರು‌‌ ದಾಖಲಾಗಿದ್ದರಿಂದ ಸತೀಶ್ ಜಾರಕಿಹೊಳಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ವಕೀಲ‌ ಕೆ. ದಿಲೀಪ್ ಕುಮಾರ್ ಎಂಬುವವರು ಖಾಸಗಿ ದೂರು ನೀಡಿದ್ದರಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಿಂದ ವಿಚಾರಣಗೆ ಹಾಜರಾಗುವಂತೆ ಸತೀಶ್‌ ಜಾರಕಿಹೊಳಿಗೆ ಸಮನ್ಸ್​ ನೀಡಲಾಗಿದೆ. 2022ರ ನವೆಂಬರ್‌ 7ರಂದು ಕಾರ್ಯಕ್ರಮವೊಂದರಲ್ಲಿ ಹಿಂದು ಪದಕ್ಕೆ ಆಶ್ಲೀಲ ಅರ್ಥವಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರ್ಟ್‌ಗೆ ವಕೀಲ‌ ದೂರು ನೀಡಿದ್ದಾರೆ.

ವಕೀಲ‌ ಕೆ. ದಿಲೀಪ್ ಕುಮಾರ್ ನೀಡಿದ್ದ ದೂರು ಪರಿಗಣಿಸಿದ ನ್ಯಾ. ಕೆ.ಎನ್.ಶಿವಕುಮಾರ್ ಅವರಿದ್ದ ಪೀಠ ಆಗಸ್ಟ್​ 27ಕ್ಕೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ನೀಡಿದೆ.

2022ರ ನವೆಂಬರ್​ನಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಮಾನವ ಬಂದುತ್ವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ಸತೀಶ್​ ಜಾರಕಿಹೊಳಿ, ಹಿಂದೂ ಪದವೆಂದರೆ ಅದು ಕೆಟ್ಟ ಅರ್ಥಗಳನ್ನು ಕೊಡುವಂತದ್ದು. ಹಿಂದೂ ಎನ್ನುವುದು ಪರ್ಷಿಯನ್ ಭಾಷೆಯ ಪದ, ಅದರ ಅರ್ಥ ಅಶ್ಲೀಲವಾಗಿದೆ. ಭಾರತಕ್ಕೂ ಪರ್ಷಿಯನ್​ಗೂ ಏನು ಸಂಬಂಧ? ಎಂದು ಹೇಳಿದ್ದರು.

ಮುಂದುವರೆದು ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯಾದಿಂದ ಬಂದ ಪದ. ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ. ಅದನ್ನು ನೀವು ಕೇಳಿದ್ರೆ ನಾಚಿಕೆ ಪಡುತ್ತೀರಿ ಎಂದಿದ್ದಾರೆ. ಬೇಕಾದರೆ ಯಾರಾದರೂ ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸಚಿವ ಸತೀಶ್ ಜಾರಕಿಹೊಳಿಯವರ ಹೇಳಿಕೆಯನ್ನು ಡಿಸಿಎಂ ಡಿಕೆ ಶಿವಕುಮಾರ್​, ರಾಜ್ಯ ಪ್ರಧಾನ ಕಾರ್ಯದರ್ಶಿ ರಣದೀಪ್​ ಸಿಂಗ್ ಸುರ್ಜೇವಾಲಾ ಖಂಡಿಸಿದ್ದರು. ಸತೀಶ್​ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ, ಇದನ್ನು ಪಕ್ಷ ತಿರಸ್ಕರಿಸುತ್ತದೆ ಎಂದು ಸುರ್ಜೇವಾಲಾ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net