

ಬೆಳ್ತಂಗಡಿ: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ಕೋಟ್ಯಂತರ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಿಂದು ಜನಜಾಗೃತಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿ ಮುಖ್ಯಮಂತ್ರಿಗೆ ಉಪ ತಹಸೀಲ್ದಾರ್ ಜಯ ಕೆ. ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಡಾ.ಎಸ್.ಎಲ್.ಭೈರಪ್ಪ ಅವರಂತಹ ಗಣ್ಯರನ್ನು ಪರಿಗಣಿಸದೆ, ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಸರಿಯಲ್ಲ. ‘ಡಾ.ಎಸ್.ಎಲ್.ಭೈರಪ್ಪ’ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗಳ ಜತೆಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ಸಾಹಿತ್ಯ ಮತ್ತು ದಾರ್ಶನಿಕ ಕೊಡುಗೆಗಳು ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದಿವೆ. ಇಂತಹ ಮಹನೀಯರನ್ನು ಕಡೆಗಣಿಸುವುದು ನಾಡಿನ ಸಂಸ್ಕೃತಿಗೆ ಮಾಡುವ ಅವಮಾನ ಎಂದು ಸಮಿತಿ ತಿಳಿಸಿದೆ.
ಪ್ರಮುಖರಾದ ಉಮೇಶ್, ಕೇಶವ, ವೀಣಾ, ಯೋಗೀಶ್ ನಡೀಗುತ್ತು, ವಸಂತ ಬಂಗೇರ, ಶಿವರಾಮ್ ಉಜಿರೆ, ರಾವೇಂದ್ರ ಕಾಮತ್ ಹಾಗೂ ಎಂ.ಹರೀಶ್ ಉಪಸ್ಥಿತರಿದ್ದರು.