

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆ ಮುಖಂಡರ ವಿರುದ್ಧ ರೌಡಿ ಶೀಟರ್ ತೆರೆಯುವುದು, ಗೂಂಡಾಕಾಯ್ದೆ ಬಳಸುವುದು ಸೇರಿದಂತೆ ನಿರಂತರ ಕಿರುಕುಳ ನೀಡುತ್ತಿದ್ದು, ಈ ಮೂಲಕ ಹಿಂದೂ ಸಂಘಟನೆ ಮುಗಿಸುವ ಹುನ್ನಾರ ನಡೆಸುತ್ತಿದೆ ಎಂದು ವಿಹಿಂಪ ಪ್ರಾಂತ ಪ್ರಮುಖ್ ಸುನೀಲ್ ಕೆ.ಆರ್. ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಪೋಲಿಸ್ ಇಲಾಖೆಯ ಕಾನೂನು ವಿರೋಧಿ ಕ್ರಮವನ್ನು ಖಂಡಿಸಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಭಾಷಣ ಮಾಡಿದರೆ ಕೇಸು, ಸಾಮಾಜಿಕ ಜಾಲತಾಣದಲ್ಲಿ ಬರೆದರೆ ಕೇಸ್ ಹಾಕುವ ಮೂಲಕ ಕಾರ್ಯಕರ್ತರನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕು ಎಂದರು.
ಗೋ ಹತ್ಯೆ ನಿಂತರೆ ಶಾಂತಿ
ರಾಜ್ಯ ಸರ್ಕಾರ ಆ್ಯಂಟಿ ಕಮ್ಯುನಲ್ ೋರ್ಸ್ ರಚಿಸಿದ ವಿಶೇಷ ಪಡೆ ಮೂಲಕ ಸಮಾಜವಿರೋಧಿ ಕೃತ್ಯಗಳನ್ನು ನಿಲ್ಲಿಸಬೇಕು. ಇದರಿಂದ ಸಮಾಜದಲ್ಲಿ ಕೋಮುಸೌಹಾರ್ದತೆ ಬೆಳೆಯಲಿದೆ. ಲವ್ ಜಿಹಾದ್, ಗೋ ಕಳ್ಳತನ, ಅಕ್ರಮ ಕಸಾಯಿಖಾನೆ ನಿಲ್ಲಿಸಿದರೆ ಶಾಂತಿ ನೆಲೆಸುತ್ತದೆ ಎಂದರು.
ಚಪ್ಪಾಳೆ ಕೆನ್ನೆಗೆ ತಟ್ಟಲಿದೆ
ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಬಗ್ಗೆ ಮಾತನಾಡಿದರೆ ಅದು ಹೇಗೆ ಪ್ರಚೋದನೆಯಾಗುತ್ತದೆ. ಕಾಂಗ್ರೆಸ್ ಸರ್ಕಾರ ಒಂದು ಕೈಯಿಂದ ಚಪ್ಪಾಳೆ ಹೊಡೆದರೆ ಕೆನ್ನೆಗೆ ತಟ್ಟುವುದು ಖಂಡಿತ ಎಂದು ಹೇಳಿದರು.
ಹಿಂದೂ ಸಂಟನೆ ಮುಖಂಡ ದಿನೇಶ್ ಮೆಂಡನ್, ವಾಸುದೇವ ಗಂಗೊಳ್ಳಿ, ಮಹೇಶ್ ಬೈಲೂರು, ಉದ್ಯಮಿ ಅಜಯ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.