ಬೆಳ್ತಂಗಡಿ: ವಿಶ್ವ ಹಿಂದು ಪರಿಷತ್‌ಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆ, ಸೆ.1ರಂದು ಉಜಿರೆಯಲ್ಲಿ ಬೃಹತ್ ಹಿಂದು ಸಮಾವೇಶ ನಡೆಯಲಿದೆ ಎಂದು ವಿಹಿಂಪ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶವ್ಯಾಪಿ ಕಾರ್ಯಕ್ರಮ ನಿಮಿತ್ತ ದ.ಕ. ಜಿಲ್ಲೆ, ಉಡುಪಿ ಸೇರಿ 30ಕ್ಕೂ ಅಧಿಕ ಪ್ರಖಂಡದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳ್ತಂಗಡಿ ಕಾರ್ಯಕ್ರಮಕ್ಕೆ ಉತ್ಸವ ಸಮಿತಿ ಆಯ್ಕೆ ಮಾಡಲಾಗಿದೆ. ಸಾಧು-ಸಂತರು, ಧಾರ್ಮಿಕ ಮುಖಂಡರು, ಜಾತಿ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳು ಜತೆಗೂಡಿ ಶೋಭಾಯಾತ್ರೆ ನಡೆಸಲಿದ್ದೇವೆ. ಸಮಾಜದಲ್ಲಿ ಪರಿವರ್ತನೆ ಮಾಡುವ ಕೆಲಸವಾಗಲಿದ್ದು, ಪರಿಸರ ಸಂರಕ್ಷಣಾ ದೃಷ್ಟಿಯಿಂದ, ಡ್ರಗ್ಸ್ ಮುಕ್ತವಾಗಿಸುವ ಕಾರ್ಯವಾಗಲಿದೆ ಎಂದರು.
ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ಸೆ.1ರಂದು ಬೆಳಗ್ಗೆ 9.30ಕ್ಕೆ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಶೋಭಾಯಾತ್ರೆ ನಡೆಯಲಿದೆ. ವಿಹಿಂಪ ಹಿರಿಯ ಕಾರ್ಯಕರ್ತ ಮೋಹನ್ ರಾವ್ ಕಲ್ಮಂಜ ಚಾಲನೆ ನೀಡುವರು. ಸಂಘದ ಹಿರಿಯರಾದ ಶೇಷಗಿರಿ ಶೆಣೈ, ಸತೀಶ್ಚಂದ್ರ ಸುರ್ಯಗುತ್ತು, ಗಣೇಶ್ ಭಟ್ ಕಾಂತಾಜೆ, ಪೂರಣ್ ವರ್ಮ, ದಯಾಕರ್ ಭಾಗವಹಿಸಲಿದ್ದಾರೆ ಎಂದರು.
ವಿಹಿಂಪ ಷಷ್ಠಿಪೂರ್ತಿ ಉತ್ಸವ ಸಮಿತಿ ಅಧ್ಯಕ್ಷ ಡಾ.ಎಂ.ಎಂ.ದಯಾಕರ್, ದಿನೇಶ್ ಚಾರ್ಮಾಡಿ, ಸಂಪತ್ ಬಿ.ಸುವರ್ಣ, ಮೋಹನ್ ಬೆಳ್ತಂಗಡಿ ಉಪಸ್ಥಿತರಿದ್ದರು.
ಕುಣಿತ ಭಜನೆ, ಚೆಂಡೆ ವಾದ್ಯ, ಕೀಲು ಕುದುರೆ
11.30ಕ್ಕೆ ಉಜಿರೆ ಶಾರದಾ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಶೋಭಾಯಾತ್ರೆಯಲ್ಲಿ ಕೃಷ್ಣವೇಷ, 60 ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ ವಾದ್ಯ, ಕೀಲು ಕುದುರೆ, ಬೈಕ್‌ರೄಾಲಿ ಸಾಗಿಬರಲಿದೆ. ಒಟ್ಟು 2,500 ಜನ, ಭಜನಾ ತಂಡ ಭಾಗವಹಿಸುವ ನಿರೀಕ್ಷೆಯಿದೆ ಎಂದು ನವೀನ್ ನೆರಿಯ ತಿಳಿಸಿದರು.