ಮಂಡಿ: ಕಂಗನಾ ರಣಾವತ್ ಮೇಲೆ ಹಲ್ಲೆ ಆರೋಪ, ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

ec
Published on

ನವದೆಹಲಿ: ಬಾಲಿವುಡ್​ ನಟಿ, ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಂಗನಾ ರನೌತ್ ನೇತೃತ್ವದ ಮೆರವಣಿಗೆಯ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ ಹಿಮಾಚಲ ಪ್ರದೇಶ ಬಿಜೆಪಿ ಭಾರತೀಯ ಚುನಾವಣಾ ಆಯೋಗಕ್ಕೆ ಔಪಚಾರಿಕ ದೂರು ಸಲ್ಲಿಸಿದೆ. ದಾಳಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಕಾಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಿಜೆಪಿಯ ಹಿಮಾಚಲ ಪ್ರದೇಶ ಕಚೇರಿಯ ಕಾರ್ಯದರ್ಶಿ ಪರ್ಮೋದ್ ಕುಮಾರ್ ಠಾಕೂರ್ ನೀಡಿದ ದೂರಿನಲ್ಲಿ, ಸ್ಥಳೀಯ ಕಾಂಗ್ರೆಸ್ ಪಕ್ಷವು ತಮ್ಮ ರ‍್ಯಾಲಿಗೆ ಅಡ್ಡಿಪಡಿಸಲು ಪೂರ್ವಯೋಜಿತ ಯೋಜನೆಯನ್ನು ರೂಪಿಸಿತ್ತು ಎಂದು ಆರೋಪಿಸಿದ್ದಾರೆ.

“ರಾಜ್ಯದ ಅನಪೇಕ್ಷಿತ ಪ್ರಭಾವದಿಂದ ಲಾಹೌಲ್ ಮತ್ತು ಸ್ಪಿತಿಯ ಕಾಜಾದಲ್ಲಿ ಬಿಜೆಪಿಯ ರಾಜಕೀಯ ಸಭೆ ನಡೆಸಲು ಈಗಾಗಲೇ ನಿಗದಿಯಾಗಿದ್ದ ಸ್ಥಳದ ಪಕ್ಕದಲ್ಲಿ ರಾಜಕೀಯ ಸಭೆ ಆಯೋಜಿಸಲು ಜಿಲ್ಲಾಡಳಿತವು ಕಾಂಗ್ರೆಸ್‌ಗೆ ಅನುಮತಿ ನೀಡಿರುವುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ಸರ್ಕಾರ ಮಾದರಿ ನೀತಿ ಸಂಹಿತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ.

ಪ್ರತಿಭಟನಾಕಾರರು ಆಕೆಗೆ ಕಪ್ಪು ಬಾವುಟ ತೋರಿಸಿ ವಾಪಸ್ ಹೋಗುವಂತೆ ಘೋಷಣೆಗಳನ್ನು ಕೂಗಿದರು. ಸ್ಥಳೀಯ ನಿವಾಸಿಗಳ ಪ್ರತಿಭಟನೆಯನ್ನು ನಿಗದಿಪಡಿಸಲಾಗಿತ್ತು ಆದರೆ ಹೆಚ್ಚಿನ ಜನರು ಅದಕ್ಕೆ ಸೇರಿದ್ದು ಮುಖಾಮುಖಿಗೆ ಕಾರಣವಾಯಿತು ಎಂದು ತಿಳಿದುಬಂದಿದೆ. ಕಂಗನಾ ಬೇಗನೇ ಅಲ್ಲಿಂದ ಮಾತು ಮುಗಿಸಿ ಹೊರಟಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು, "ನಮ್ಮ ವಾಹನಗಳ ಮೇಲೆ ದಾಳಿ ನಡೆಸಲಾಯಿತು. ಅವರು ಆಯೋಜಿಸಿದ್ದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಿದರು, ಕಾಂಗ್ರೆಸ್​ ತಮ್ಮ ಸೋಲನ್ನು ಅರಿತು ಈಗ ಬೀದಿ ಹಿಂಸಾಚಾರಕ್ಕೆ ಇಳಿದಂತೆ ತೋರುತ್ತಿದೆ. ನಮ್ಮ ಪಕ್ಷದ ಇಬ್ಬರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಂಗ್ರೆಸ್​ ಪಕ್ಷದ ನಾಯಕರು ಕೆಳಮಟ್ಟಕ್ಕೆ ಇಳಿಯುವುದನ್ನು ನೋಡುವುದು ತುಂಬಾ ದುಃಖಕರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಾಳಿಗೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಇಂತಹ ಹಿಂಸಾಚಾರಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಹಾನಿಕರ ಎಂದು ಪಕ್ಷ ಹೇಳಿಕೊಂಡಿದೆ. ತಮ್ಮ ಅಭ್ಯರ್ಥಿಗಳು ಮತ್ತು ಬೆಂಬಲಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕಂಗನಾ ರಣಾವತ್ ಹಿಂಸಾಚಾರವನ್ನು ಖಂಡಿಸಿ ಮತ್ತು ಶಾಂತಿಯುತ ಪ್ರಚಾರಕ್ಕೆ ಕರೆ ನೀಡಿದರು. ರಾಜಕೀಯ ವಿರೋಧಿಗಳು ತೋರುತ್ತಿರುವ ಆಕ್ರಮಣಶೀಲತೆಯ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮತ್ತು ಚುನಾವಣೆಯ ಸಮಯದಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಕುರಿತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net