ಚೆಂಬುಗುಡ್ಡೆ ರಸ್ತೆಯಲ್ಲಿ ಗುಡ್ಡ ಕುಸಿತ : ಮಾರ್ಗ ಅಗಲಗೊಳಿಸಿದರೂ ಮುಗಿಯದ ಸಮಸ್ಯೆ : ಸ್ಥಳೀಯರಲ್ಲಿ ಆತಂಕ

New Project
Published on

ಅನ್ಸಾರ್ ಇನೋಳಿ ಉಳ್ಳಾಲ

ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಮುಗಿದಿದೆ. ಇದೇ ವೇಳೆ ಗುಡ್ಡ ಕುಸಿತ ಆರಂಭಗೊಂಡಿದ್ದು ಚರಂಡಿ ಮುಚ್ಚಲ್ಪಟ್ಟು ಮಳೆ ಬಂದಾಗ ನೀರು ರಸ್ತೆಯಲ್ಲೇ ಹರಿದಾಡುತ್ತಿದೆ. ಒಂದೆಡೆ ಗುಡ್ಡ ಕುಸಿತದ ಭೀತಿ, ಮತ್ತೊಂದೆಡೆ ರಸ್ತೆ ಬಾಳಿಕೆಯ ಬಗ್ಗೆ ಆತಂಕ ಎದುರಾಗಿದೆ. ಗುಡ್ಡದ ಮೇಲೊಂದು ಬಹುಮಹಡಿಯ ಕಟ್ಟಡ ನಿರ್ಮಾಣ ಆಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ತೊಕ್ಕೊಟ್ಟಿಗಿಂತಲೂ ದೇರಳಕಟ್ಟೆ, ಮುಡಿಪು ಪ್ರದೇಶ ಅಭಿವೃದ್ಧಿಯ ನಾಗಾಲೋಟದಲ್ಲಿದೆ. ಇಲ್ಲಿರುವ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು, ಐಟಿ ಕಂಪನಿ, ಇನ್ನಿತರ ಉದ್ಯಮಗಳು ಹೊರಜಿಲ್ಲೆ, ಹೊರರಾಜ್ಯದ ಉದ್ಯಮಿಗಳನ್ನು ಈ ಭಾಗದತ್ತ ಸೆಳೆಯುತ್ತಿದೆ. ಈ ಕಾರಣದಿಂದ ಇಲ್ಲಿನ ರಸ್ತೆ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಆಗಿದೆ.

ಅರಣ್ಯ, ಮೆಸ್ಕಾಂ, ಲೋಕೋಪಯೋಗಿ ಹೀಗೆ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆ, ಮತ್ತೊಂದೆಡೆ ಆಸುಪಾಸಿನ ಕಟ್ಟಡಗಳಿಂದ ರಸ್ತೆಯ ಜಮೀನು ಅತಿಕ್ರಮಣ ತೆರವಿನ ಕಿರಿಕ್ಕೂ ಎದುರಾಗಿತ್ತು. ಇವೆಲ್ಲವನ್ನೂ ಮೀರಿ ನಾಲ್ಕು ವರ್ಷಗಳ ಬಳಿಕ ಎರಡನೇ ಬಾರಿ ಶಿಲಾನ್ಯಾಸ ನಡೆದು ತೊಕ್ಕೊಟ್ಟಿನಿಂದ ಚೆಂಬುಗುಡ್ಡೆ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದೆ.

ಕುಸಿಯುತ್ತಿರುವ ಗುಡ್ಡ!

ರಾಜರಸ್ತೆ ಅಗಲೀಕರಣ ಕಾಮಗಾರಿ ಮುಗಿದು ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡವಾಗಲೇ ಗುಡ್ಡ ಕುಸಿತ ಆರಂಭಗೊಂಡಿದೆ. ಇದರ ಪರಿಣಾಮ ಈ ಬಾರಿಯ ಮಳೆಗಾಲದಲ್ಲಿ ಒಂದು ಭಾಗದ ರಸ್ತೆಯನ್ನೇ ಮುಚ್ಚಲಾಗಿತ್ತು. ಗುಡ್ಡದಲ್ಲಿರುವ ಮರಗಳು ಮಗುಚಿ ಬೀಳುತ್ತಿರುವುದರಿಂದ ಮಣ್ಣು ಕುಸಿಯುತ್ತಿದೆ. ಕಲ್ಲು, ಮಣ್ಣು ಬಿದ್ದ ಪರಿಣಾಮ ಚರಂಡಿ ಮುಚ್ಚಲ್ಪಟ್ಟಿದ್ದು ಮಳೆ ಬಂದರೆ ನೀರು ರಸ್ತೆಯಲ್ಲೇ ಹರಿದಾಡುತ್ತಿದೆ. ಇದರಿಂದಾಗಿ ಸುಂದರವಾಗಿ ನಿರ್ಮಾಣಗೊಂಡಿರುವ ಹೊಸ ರಸ್ತೆಯ ಬಾಳಿಕೆ ಬಗ್ಗೆ ಆತಂಕ ಎದುರಾಗಿದೆ.

ಗುಡ್ಡದ ಮೇಲೊಂದು ಕಟ್ಟಡ!

ಈ ಗುಡ್ಡದ ಮೇಲೊಂದು ಖಾಸಗಿ ವಸತಿ ಸಂಕೀರ್ಣ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಕ್ಕೆ 2022ರ ಡಿಸೆಂಬರ್ ತಿಂಗಳಲ್ಲಿ ಉಳ್ಳಾಲ ನಗರಸಭೆಯಿಂದ ಒಂದು ವರ್ಷದ ಅವಧಿಗೆ ಪರವಾನಿಗೆ ನೀಡಲಾಗಿದ್ದು, 2023ರ ಡಿಸೆಂಬರ್ ತಿಂಗಳಲ್ಲೇ ಅವಧಿ ಮುಕ್ತಾಯಗೊಂಡಿದೆ. ಇಲ್ಲಿ ಗುಡ್ಡ ಅಪಾಯಕಾರಿಯಾಗಿದ್ದರೂ ಮೇಲ್ಭಾಗದಲ್ಲಿ ಆರು ಅಂತಸ್ತಿನ ಕಟ್ಟಡಕ್ಕೆ ಅನುಮತಿ ನೀಡಿರುವ ಬಗ್ಗೆ ಪ್ರಶ್ನೆ ಎದ್ದಿದೆ. ಈ ಕಟ್ಟಡದಿಂದ ಗುಡ್ಡಕ್ಕೆ ಇನ್ನಷ್ಟು ಅಪಾಯ ಎದುರಾಗಲಿದೆ ಎನ್ನುವ ಆತಂಕ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.

ಗುಡ್ಡ ಕುಸಿತ ತಡೆಯುವ ನಿಟ್ಟಿನಲ್ಲಿ ತಡೆಗೋಡೆ ಕಾಮಗಾರಿಗೆ ಮೂರು ಕೋಟಿ ಅನುದಾನ ಮೀಸಲಿಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಚೆಂಬುಗುಡ್ಡೆಯಲ್ಲಿ ಸಣ್ಣ ರಸ್ತೆ ಇದ್ದು ನಾಲ್ಕು ವರ್ಷಗಳ ಹಿಂದೆ ಅಗಲೀಕರಣಗೊಳಿಸಲಾಗಿದೆ. ಹದಗೆಟ್ಟಿರುವ ಬಗ್ಗೆ ಇಂಜಿನಿಯರ್, ಗುತ್ತಿಗೆದಾರನ ವಿರುದ್ಧ ತನಿಖೆಗೆ ಸೂಚಿಸಲಾಗಿದೆ. ಯು.ಟಿ.ಖಾದರ್, ಸ್ಪೀಕರ್ ಚೆಂಬುಗುಡ್ಡೆಯಲ್ಲಿ ಗುಡ್ಡ ಕುಸಿತ ಆರಂಭಗೊಂಡಿದ್ದು, ಈಗಲೇ ಬಲಿಷ್ಠ ತಡೆಗೋಡೆ ನಿರ್ಮಿಸದಿದ್ದರೆ ಮುಂದಕ್ಕೆ ಕೆತ್ತಿಕ್ಕಲ್ ಆಗುವ ಆತಂಕ ಇದೆ. ಇಷ್ಟೊಂದು ಅಪಾಯಕಾರಿ ಗುಡ್ಡದ ಮೇಲೆ ಬಹಮಹಡಿಯ ಕಟ್ಟಡಕ್ಕೆ ನಗರಸಭೆಯಿಂದ ಅನುಮತಿ ನೀಡಿರುವುದೇ ಅಚ್ಚರಿ. ದಿನಕರ್ ಉಳ್ಳಾಲ್ ಉಳ್ಳಾಲ ನಗರಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net