ಬಿಬಿಎಂಪಿ ಚುನಾವಣೆ ಯಾವಾಗ? ಮಹಾನಗರ ಪಾಲಿಕೆ ಚುನಾವಣೆ ಕುತೂಹಲಕ್ಕಿಂದು ತೆರೆ

BBMP office
Published on

ಬೆಂಗಳೂರು: ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಶುಕ್ರವಾರ (ಡಿ.4) ತೀರ್ಪು ಪ್ರಕಟಿಸಲಿರುವ ಹೈಕೋರ್ಟ್, ಚುನಾವಣೆ ನಡೆಯಲಿದೆಯೇ ಅಥವಾ ಮುಂದೂಡಲ್ಪಡುವುದೇ ಎಂಬ ಕುತೂಹಲಕ್ಕೆ ತೆರೆ ಎಳೆಯಲಿದೆ.

ರಾಜ್ಯ ಚುನಾವಣಾ ಆಯೋಗ, ಮಾಜಿ ಕಾರ್ಪೆರೇ ಟರ್​ಗಳಾದ ಎಂ. ಶಿವರಾಜು ಹಾಗೂ ಅಬ್ದುಲ್ ವಾಜೀದ್ ಸಲ್ಲಿಸಿರುವ ಪಿಐಎಲ್​ಗಳ ಕುರಿತು ನ.25ರಂದು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿರುವ ತೀರ್ಪನ್ನು ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಪ್ರಕಟಿಸಲಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ರಾಜ್ಯ ಚುನಾವಣಾ ಆಯೋಗ, ಈಗಾಗಲೇ ಪಾಲಿಕೆ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗಿದ್ದು, ಮತದಾರರ ಪಟ್ಟಿ ತಯಾರಿಕೆಗೆ 3 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿತ್ತು. ಮಾಜಿ ಕಾರ್ಪೆರೇಟರ್​ಗಳ ಪರ ವಕೀಲರು, ಪಾಲಿಕೆ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಸಂವಿಧಾನದ ಪರಿಚ್ಛೇದ 243(ಯು) ಅನ್ವಯ ಚುನಾವಣೆಗಳನ್ನು ನಡೆಸಲೇಬೇಕು. ಈಗ ಚುನಾವಣೆ ನಡೆಸದಿದ್ದರೆ 2021ರ ಜನಗಣತಿ ಬರಲಿದೆ. ಆಗ ಮತ್ತೆ ಚುನಾವಣೆ ಮುಂದೂಡುವ ಸಾಧ್ಯತೆ ಇರುತ್ತದೆ ಎಂದು ಕೋರ್ಟ್​ಗೆ ವಿವರಿಸಿದ್ದರು.

ಚುನಾವಣೆ ಮುಂದೂಡುವ ಯಾವ ಉದ್ದೇಶವೂ ಸರ್ಕಾರಕ್ಕಿಲ್ಲ. ಬೆಂಗಳೂರು ವಿಸ್ತಾರವಾಗಿ ಬೆಳೆದಿದ್ದು, ವಾರ್ಡ್ ಗಳ ಸಂಖ್ಯೆ ಹೆಚ್ಚಳ ಮಾಡುವ ಅಗತ್ಯವಿದೆ. ಅದಕ್ಕಾಗಿ ಜಂಟಿ ಸದನ ಸಮಿತಿಯ ಶಿಫಾರಸ್ಸಿನಂತೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾರುವ ಕಾರಣ ಸದ್ಯ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ವಾದ ಮಂಡಿಸಿತ್ತು.

ಸರ್ಕಾರದ ವಾದ ಒಪ್ಪದ ಪೀಠ, ವಾರ್ಡ್​ಗಳ ಸಂಖ್ಯೆ ಹೆಚ್ಚಳ ಮಾಡಲು ಕಾಯ್ದೆ ಜಾರಿಗೊಳಿಸಲಾಗಿದೆ ಎಂಬ ಕಾರಣಕ್ಕೆ ಪಾಲಿಕೆ ಚುನಾವಣೆ ಮುಂದೂಡಬೇಕೆಂಬ ಸರ್ಕಾರದ ವಾದ ಒಪ್ಪಿದರೆ ಸಾಂವಿಧಾನಿಕ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net