

ದೆಹಲಿ: ದೇಶದಲ್ಲಿ ಡಿಜಿಟಲ್ ವಹಿವಾಟು ಲಭ್ಯವಿದ್ದರೂ ದೊಡ್ಡ ಮೊತ್ತದಲ್ಲಿ ನಗದು ವಹಿವಾಟು ನಡೆಯುವುದರ ಮೇಲೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಇನ್ನು ಮುಂದೆ ಹದ್ದಿನ ಕಣ್ಣಿಡಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಐಟಿ ಇಲಾಖೆಗೆ ಮಹತ್ವದ ಸೂಚನೆ ನೀಡಿದೆ. ಹೋಟೆಲ್‌ಗಳು, ಐಷಾರಾಮಿ ಬ್ರಾಂಡ್‌ಗಳ ಮಾರಾಟ, ಆಸ್ಪತ್ರೆಗಳು ಮತ್ತು ಐವಿಎಫ್ ಚಿಕಿತ್ಸಾಲಯಗಳಲ್ಲಿ 'ದೊಡ್ಡ' ನಗದು ವಹಿವಾಟುಗಳು ನಡೆಯುತ್ತಿವೆ. ಇತ್ತ ಗಮನಹರಿಸಬೇಕು ಎಂದು ಅದು ಸೂಚಿಸಿದೆ. ಈ ನಿಟ್ಟಿನಲ್ಲಿ ವಾರ್ಷಿಕ ಯೋಜನೆ ಸಹ ಬಿಡುಗಡೆಯಾಗಿದೆ.
ಸಾಮಾನ್ಯವಾಗಿ 2 ಲಕ್ಷ ರೂ.ಗಿತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಅದರ ವಿವರಗಳನ್ನು ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಬೇಕಾಗುತ್ತದೆ. ಆದರೆ ನಿಯಮಾವಳಿಗಳನ್ನು ಉಲ್ಲಂಘಿಸಿ ಅನಿಯಂತ್ರಿತವಾಗಿ ದೊಡ್ಡ ಮೊತ್ತದ ವಹಿವಾಟು ನಡೆಸಲಾಗುತ್ತಿದೆ ಎಂದು ಸಿಬಿಡಿಟಿ ಐಟಿ ಇಲಾಖೆಗೆ ತಿಳಿಸಿದೆ.
ಕೆಲವು ನಗದು ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ವಿವರಗಳನ್ನು ಸಂಗ್ರಹಿಸಬೇಕಾಗಿದ್ದರೂ, ಅಂತಹ ವಿವರಗಳನ್ನು ನೋಂದಾಯಿಸಲಾಗಿಲ್ಲ. ಅವುಗಳನ್ನು ಪರಿಶೀಲಿಸಲು ಯಾವುದೇ ಕಾರ್ಯವಿಧಾನವಿಲ್ಲ. ಆದ್ದರಿಂದ, ತೆರಿಗೆದಾರರ ಮಾಹಿತಿಯೊಂದಿಗೆ ದೊಡ್ಡ ಪ್ರಮಾಣದ ವಹಿವಾಟುಗಳನ್ನು ಪರಿಶೀಲಿಸಬೇಕು. ಮೋಸದ ವಹಿವಾಟುಗಳನ್ನು ಗುರುತಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.