ಅಧಿಕ ರಕ್ತದೊತ್ತಡ ಜೀವನ ಶೈಲಿಯ ಪಿಡುಗು ತಪಾಸಣಾ ಶಿಬಿರದಲ್ಲಿ ಡಾ.ಚೂಂತಾರು ಅಭಿಮತ

mng--17 may BP check camp
Published on

ಮಂಗಳೂರು: ಅಧಿಕ ರಕ್ತದೊತ್ತಡ ಎನ್ನುವುದು ರೋಗವಲ್ಲ. ಇದೊಂದು ಅನಾರೋಗ್ಯಕರ ಜೀವನಶೈಲಿಯ ಪಿಡುಗು. ಇತ್ತೀಚಿನ ದಿನಗಳಲ್ಲಿ ಯುವಕರು ಕೂಡಾ ಈ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ದೋಷಪೂರಿತ ಕೊಬ್ಬು ಮಿಶ್ರಿತ ಆಹಾರ, ಕರಿದ ತಿಂಡಿಗಳ ಅತ್ಯಧಿಕ ಸೇವನೆ, ದೈಹಿಕ ಪರಿಶ್ರಮವಿಲ್ಲದ ಜೀವನಶೈಲಿ ಕಾರಣವಾಗುತ್ತಿದೆ ಎಂದು ದಂತ ವೈದ್ಯ ಡಾ.ಮುರಲೀಮೋಹನ್ ಚೂಂತಾರು ಹೇಳಿದರು.


ವಿಶ್ವ ಅಧಿಕ ರಕ್ತದೊತ್ತಡ ಜಾಗೃತಿ ದಿನದ ಅಂಗವಾಗಿ ಶುಕ್ರವಾರ ಮಂಜೇಶ್ವರ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಉಚಿತ ರಕ್ತದೊತ್ತಡ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.


ವಿಪರೀತ ಒತ್ತಡದ ಕೆಲಸದ ವಾತಾವರಣ ಮತ್ತು ಮೋಜು ಮಸ್ತಿಗೆಂದು ದೂಮಪಾನ, ಮದ್ಯಪಾನದ ದುರ್ಬಳಕೆಗಳಿಂದಾಗಿ ಪ್ರತೀ ಹತ್ತರಲ್ಲಿ ಆರು ಮಂದಿ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈಗಿಂದೀಗಲೇ ಜೀವನಶೈಲಿ ಮಾರ್ಪಾಡು, ಆಹಾರದ ಬದಲಾವಣೆ ಮತ್ತು ನಿರಂತರ ದೈಹಿಕ ಕಸರತ್ತು ಮಾಡಿದರೆ ಮಾತ್ರ ಈ ರೋಗಗಳಿಂದ ಶಾಶ್ವತ ಪರಿಹಾರ ಪಡೆಯಬಹುದು ಎಂದರು.


ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ದಂತ ರೋಗಿಗಳ ರಕ್ತದೊತ್ತಡವನ್ನು ಉಚಿತವಾಗಿ ಪರೀಕ್ಷಿಸಲಾಯಿತು. ಸುಮಾರು 25ಕ್ಕೂ ಹೆಚ್ಚು ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಈ ಶಿಬಿರದಿಂದ ದೃಢಪಟ್ಟಿತು.


ದಂತ ವೈದ್ಯೆ ಡಾ.ರಾಜಶ್ರೀ ಮೋಹನ್ ಹಾಗೂ ಶುಶ್ರೂಷಕರಾದ ರಮ್ಯ. ಚೈತ್ರ, ಸುಷ್ಮಿತಾ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಇವರ ಜಂಟಿ ಆಶ್ರಯದಲ್ಲಿ ಈ ಶಿಬಿರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net