

ಬೆಂಗಳೂರು: ಶುಕ್ರವಾರವಷ್ಟೇ ಬಿಡುಗಡೆ ಆಗಿರುವ 'ಹೀರೋ' ಸಿನಿಮಾದ ಮೂಲಕ ಮತ್ತೊಮ್ಮೆ ಹೀರೋ ಆದ, ನಿರ್ಮಾಪಕರೂ ಆದ ಖುಷಿಯಲ್ಲಿರುವ ರಿಷಬ್ ಶೆಟ್ಟಿ, ಸಿನಿಮಾ ರಿಲೀಸ್ ಸಂತೋಷದ ಜತೆಗೆ ಬೇಸರದಲ್ಲೂ ಇದ್ದಾರೆ. 'ಹೀರೋ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು ಹಾಗೂ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ ರಿಷಬ್ ಬೇಸರಗೊಂಡಿದ್ಯಾಕೆ ಎಂಬುದಕ್ಕೆ ಉತ್ತರ ಆ ವಿಲನ್.
ಹೌದು.. ಹೀರೋ ಸಿನಿಮಾಗೆ ಈ ಪೈರಸಿಯೇ ದೊಡ್ಡ ವಿಲನ್ ಆಗಿ ಕಾಡುತ್ತಿದೆ. ಈ ಬಗ್ಗೆ ಬೇಸರ ತೋಡಿಕೊಂಡಿರುವ ರಿಷಬ್ ಶೆಟ್ಟಿ, 'ಎರಡು ಕಡೆಗಳಲ್ಲಿ 'ಹೀರೋ' ಸಿನಿಮಾ ಯಶಸ್ವಿಯಾಗಿ ಓಡುತ್ತಿದೆ. ಒಂದು ಚಿತ್ರಮಂದಿರಗಳಲ್ಲಿ, ಮತ್ತೊಂದು ಪೈರಸಿಯಲ್ಲಿ..ಇನ್ನು ನಮ್ದೇನಿದೆ?' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಕರೊನಾ ಲಾಕ್ಡೌನ್ ಸಮಯದಲ್ಲಿ ಇಡೀ ಊರು ಮಲಗಿದ್ದಾಗ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ 24 ಜನ ಸೇರಿ ಈ ಸಿನಿಮಾ ಮಾಡಿದ್ದೇವೆ. ಅದರಂತೆ ಚಿತ್ರಮಂದಿರಗಳಿಗೆ ಜನ ಸಹ ಹರಿದು ಬರುತ್ತಿದ್ದಾರೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಪೈರಸಿ ಕಾಪಿಗಳು ಹರಿದಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರಮಂದಿರದೊಳಕ್ಕೆ ಮೊಬೈಲ್ಫೋನ್-ಕ್ಯಾಮರಾ ತೆಗೆದುಕೊಂಡು ಹೋಗಿ ಒಂದಿಡೀ ಸಿನಿಮಾ ರೆಕಾರ್ಡ್ ಮಾಡಿಕೊಳ್ಳಲು ಅದು ಹೇಗೆ ಸಾಧ್ಯ? ನಿಜಕ್ಕೂ ಇದು ಬೇಸರದ ಸಂಗತಿ. ಸರ್ಕಾರ ಯಾವ್ಯಾವುದೋ ಆ್ಯಪ್ಗಳನ್ನು, ಪೋರ್ಟಲ್ಗಳನ್ನು ಬ್ಯಾನ್ ಮಾಡುತ್ತಿದೆ. ಪೈರಸಿ ಕಾಪಿಗಳನ್ನು ಹಾಕುವ ಇಂಥ ವೇದಿಕೆಗಳನ್ನು ಯಾಕೆ ಬ್ಯಾನ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿರುವ ರಿಷಬ್ ಶೆಟ್ಟಿ, 'ದಯಮಾಡಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ' ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಪೈರಸಿ ಲಿಂಕ್ಗಳು ಕಂಡುಬಂದಲ್ಲಿ ಸೋಷಿಯಲ್ ಮೀಡಿಯಾಗ ಮೂಲಕ ತಮ್ಮ ಗಮನ ಸೆಳೆಯುವಂತೆಯೂ ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ. ಆ ಮೂಲಕ ಅಂಥ ಲಿಂಕ್ಗಳನ್ನು ತೆಗೆದುಹಾಕುವುದಾಗಿ ಹೇಳಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ