ಅರಳಲೇ ಇಲ್ಲ ಹೆಮ್ಮಾಡಿ ಸೇವಂತಿ

sevanti
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕಣ್ಣಿಗೆ ಮುದ ನೀಡುವ ಆಕರ್ಷಕ ಹಳದಿ ಬಣ್ಣ, ಘಮಘಮ ಸುವಾಸನೆ ಹಾಗೂ ನಿರ್ದಿಷ್ಟ ಗಾತ್ರ ಹೊಂದುವ ಮೂಲಕ ಕುಂದಾಪುರ-ಬೈಂದೂರು ಭಾಗದಲ್ಲಿ ಹೆಸರುವಾಸಿಯಾಗಿದ್ದ ಹೆಮ್ಮಾಡಿ ಸೇವಂತಿಗೆ ಈ ಬಾರಿ ಹೆಚ್ಚು ಅರಳದೆ ಮೊಗ್ಗಾಗಿಯೇ ಉಳಿದಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಾತಾವರಣದ ಏರುಪೇರು, ಆಗ್ಗಾಗೆ ಮಳೆ, ಸೆಕೆ ಜಾಸ್ತಿ, ಚಳಿ ಕಡಿಮೆ ಹಾಗೂ ಇಬ್ಬನಿ ಬೀಳದೆ ಇರುವುದರಿಂದ ಈ ಸಮಯದಲ್ಲಿ ಅರಳಬೇಕಿದ್ದ ಸೇವಂತಿಗೆ ಇನ್ನೂ ಮೊಗ್ಗಾಗಿಯೇ ಇದೆ.

ಸಾಂಪ್ರದಾಯಿಕ ಬೆಳೆ

ತಾಲೂಕಿನ ಹೆಮ್ಮಾಡಿ ಹಾಗೂ ಇಲ್ಲಿಗೆ ಸಮೀಪದ ಕಟ್ಟು, ಹೊಸ್ಕಳಿ, ಸುಳ್ಸೆ, ಹರೆಗೋಡು ಮೊದಲಾದೆಡೆ ಹಲವಾರು ಮಂದಿ ಪ್ರತಿವರ್ಷ ಸೇವಂತಿಗೆ ಬೆಳೆಯುತ್ತಾರೆ. ನೂರಾರು ವರ್ಷಗಳಿಂದಲೂ ಇಲ್ಲಿ ಸೇವಂತಿಗೆ ಬೆಳೆಯುವ ಮೂಲಕ ಕೃಷಿಕರು ಇದನ್ನೊಂದು ಸಾಂಪ್ರದಾಯಿಕ ಬೆಳೆಯನ್ನಾಗಿ ಬೆಳೆಯುತ್ತಿದ್ದಾರೆ. ಒಂದಷ್ಟು ಗದ್ದೆಗಳನ್ನು ಇದಕ್ಕಾಗಿ ಬಿಟ್ಟಿದ್ದಾರೆ. ಜುಲೈ-ಆಗಸ್ಟ್ (ಸೋಣೆ) ತಿಂಗಳಿಂದ ಸೇವಂತಿ ಗಿಡಗಳನ್ನು ಒಗ್ಗು ಹಾಕಬೇಕು. ಬೇರು ಬಂದ ಬಳಿಕ ಅಕ್ಟೋಬರ್ ತಿಂಗಳಿನಲ್ಲಿ ನೆಟ್ಟು, ನೀರುಣಿಸಿ ಹಗಲಿರುಳು ತಮ್ಮ ಗದ್ದೆಗಳಲ್ಲಿ ಗಿಡಗಳನ್ನು ಪೋಣಿಸಿ ಬೇಕಾದ ರಸಗೊಬ್ಬರಗಳನ್ನು ಹಾಕಬೇಕು.

ನಿರೀಕ್ಷೆ ಹುಸಿಯಾಗಿದೆ

ಫಸಲು ಚೆನ್ನಾಗಿ ಬರಲು ಬೆಳೆಗಾರರು ಬಿಸಿಲು, ಮಳೆ ಗಾಳಿ ಎನ್ನದೇ ನಿತ್ಯ ಪರಿಶ್ರಮ ಪಡುತ್ತಾರೆ. ಅಂದಾಜು ನಾಲ್ಕು ತಿಂಗಳ ಕಾಲ ಗಿಡಗಳ ಬೆಳೆ ಇದಾಗಿದ್ದು, ಜನವರಿ ತಿಂಗಳಿನಲ್ಲಿ ಮೊಗ್ಗು ಹಳದಿ ಹೂವಾಗಿ ಅರಳುವುದನ್ನು ನೋಡುವುದೆ ಚೆಂದ. ಸ್ಥಳೀಯ ಹಬ್ಬ-ಕೆಂಡ ಸೇವೆ ಮೊದಲಾದ ಉತ್ಸವಗಳಲ್ಲಿ ಈ ಸೇವಂತಿ ಹೆಸರುವಾಸಿಯಾಗಿದೆ. ಈ ಬಾರಿ ನಿರೀಕ್ಷೆಯಷ್ಟು ಹೂ ಅರಳಿಲ್ಲ. ವಾತಾವರಣದಲ್ಲಿನ ಹವಮಾನ ಕೊರತೆ ಇದಕ್ಕೆ ಕಾರಣ.

ಹೆಮ್ಮಾಡಿ ಸ್ಯಾವಂತಿ ಭಾರಿ ಫೇಮಸ್

ಪಕ್ಕಾ ನಾಟಿ ಸೇವಂತಿ ಹೂ ಇದಾಗಿದ್ದು, ಗಾತ್ರದಲ್ಲಿ ಸಣ್ಣದಾಗಿ, ಪರಿಮಳದಲ್ಲಿ ವೈಶಿಷ್ಟೃವಾಗಿರುತ್ತದೆ. ಸ್ಥಳೀಯ ಆಡು ಭಾಷೆ ಕುಂದಾಪುರ ಕನ್ನಡದಲ್ಲಿ ಈ ಹೂವನ್ನು ಹೆಮ್ಮಾಡಿ ಸ್ಯಾವಂತಿ ಎಂದು ಕರೆಯಲಾಗುತ್ತದೆ. ಹೂಗಳನ್ನು ಸೂಜಿ ಹಾಗೂ ಬಾಳೆ ಬಳ್ಳಿ ದಾರದಿಂದ ಪೋಣಿಸಿ ಹೂಮಾಲೆ ಮಾಡಿ ಹೂವಿಗೆ ಇನ್ನಷ್ಟು ಅಂದ ನೀಡುವ ಮಹಿಳೆಯರ ಕೈಚಳಕ ಇನ್ನೂ ಸುಂದರ. ಗದ್ದೆಯಿಂದ ಹೂವನ್ನು ಆರಿಸಿ (ಕೊಯ್ದು ತಂದು) 1000 ಹೂಗಳ ಮಾಲೆ ತಯಾರಿಸಿದರೆ 40-50 ರೂ. ಹಣ ನೀಡಲಾಗುತ್ತದೆ. 20 ಗಂಟುಗಳಿಗೆ 1000 ಹೂವಿನ ಮಾಲೆಯಂತೆ ಮಾರಾಟ ಮಾಡಲಾಗುತ್ತದೆ. ಕರಾವಳಿಯ ಬೇರೆಡೆಗಳಲ್ಲಿ ಎಲ್ಲಿಯೂ ಕಂಡುಬರದ ಈ ಸೇವಂತಿಗೆ ಹೂವಿನ ಬೆಳೆ ಹೆಮ್ಮಾಡಿಯಲ್ಲಿ ಹೇರಳವಾಗಿ ಸಿಗುತ್ತದೆ.

ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯ

ಹೆಮ್ಮಾಡಿಯಲ್ಲಿ ಬೆಳೆಯುವ ಅಪೂರ್ವ ಸೇವಂತಿಗೆ ಹೂವಿಗೆ ಐತಿಹಾಸಿಕ ಪುರಾಣವಿದೆ. ಕರಾವಳಿ ಜಿಲ್ಲೆಗಳು ಅಲ್ಲದೆ ಹೊರಜಿಲ್ಲೆಯವರು ನಂಬುವ ಕಾರಣಿಕ ಕ್ಷೇತ್ರವಾದ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಪ್ರಿಯ ಎನ್ನಲಾಗುತ್ತದೆ. ಜನವರಿ ತಿಂಗಳಿನ 14ರಂದು ಜರುಗುವ ಮಕರ ಸಂಕ್ರಮಣಕ್ಕೆ ಬ್ರಹ್ಮಲಿಂಗ ದೇವರ ಕೆಂಡಸೇವೆಯ ಸಮಯದಲ್ಲಿ ಸೇವಂತಿಗೆ ಪುಷ್ಪವನ್ನು ಶ್ರೀ ದೇವರಿಗೆ ಅರ್ಪಿಸಿದರೆ ಇಷ್ಟಾರ್ಥ ನೆರವೇರುತ್ತದೆ ನಂಬಿಕೆಯಿದೆ. ಮಕರ ಸಂಕ್ರಮಣದಂದು ಬ್ರಹ್ಮಲಿಂಗನಿಗೆ ಹೂವು ಅರ್ಪಿಸಿದ ನಂತರ ಹೆಮ್ಮಾಡಿ ಸೇವಂತಿ ರಾಜ್ಯದ ವಿವಿದೆಡೆಗಳಿಗೆ ಮಾರಾಟಕ್ಕಾಗಿ ಕಳುಹಿಸಲಾಗುತ್ತೆ. ತಮ್ಮ ಗದ್ದೆಗಳಲ್ಲಿ ಮೊದಲು ಬೆಳೆದ ಹೂವನ್ನು ಇಲ್ಲಿಗೆ ಸಮರ್ಪಿಸಿದ ಬಳಿಕವೇ ವಿವಿಧ ದೈವಸ್ಥಾನಗಳ ಕೆಂಡಸೇವೆ ಮೊದಲಾದ ಉತ್ಸವಗಳಿಗೆ ಮಾರಾಟ ಮಾಡುವುದು ಇಲ್ಲಿನ ಕೃಷಿಕರ ರೂಢಿ.

ಕಳೆದ 50 ವರ್ಷಗಳಿಂದ ನಾನು ಕೂಡ ಸೇವಂತಿಗೆ ಬೆಳೆ ಬೆಳೆಯುತ್ತಿದ್ದೆ. ನಿರೀಕ್ಷಿತ ಫಲ ದೊರೆಯದೇ ಕಳೆದ ವರ್ಷದಿಂದ ಬೆಳೆಯುವುದನ್ನೇ ಬಿಟ್ಟಿದ್ದೇನೆ. -ಶೀನ ದೇವಾಡಿಗ ಮೇಲ್ಮನೆ ಕೃಷಿಕ ಸುಮಾರು 1 ಎಕರೆ ಜಾಗದಲ್ಲಿ ಹೆಮ್ಮಾಡಿಯ ಕಸ್ತೂರಿ, ಚಿತ್ರದುರ್ಗದ ಚಾಂದಿನಿ, ಬೆಂಗಳೂರು ಮೂಲದ ಸೆಂಟೆಲ್ಲೋ ಎಂಬ ಹೆಸರಿನ ಸೇವಂತಿಗೆ ಗಿಡಗಳನ್ನು ಬೆಳೆದಿದ್ದು, ಸೇವಂತಿ ಫಸಲು ಚಳಿ ಕೊರತೆಯಿಂದ ಕಡಿಮೆಯಾಗಿದೆ. ಈ ಸಂಕ್ರಾಂತಿ ಹಬ್ಬಕ್ಕೆ ಬೇರೆ ಜಿಲ್ಲೆಗಳಿಂದ ಹೂ ತರಿಸಿ ವ್ಯಾಪಾರ ಮಾಡಬೇಕಿದ್ದು 1000 ಹೂಗಳ ಮಾಲೆಗೆ 450 ರೂಪಾಯಿ ಖರ್ಚು ಬರಲಿದೆ. ಕಳೆದ ಬಾರಿ ಮಾರಣಕಟ್ಟೆ ಜಾತ್ರೆಯಲ್ಲಿ ಒಳ್ಳೆ ಬೆಲೆಯಿದ್ದು, ನಂತರ ಗಣನೀಯವಾಗಿ ದರ ಕಮ್ಮಿಯಾಗಿತ್ತು. ವಿವಿಧ ಸಮಸ್ಯೆಗಳಿಂದ ಸೇವಂತಿಗೆ ಬೆಳೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ನಮ್ಮ ಗದ್ದೆಗಳಿಗೆ ಹಂದಿಗಳು ಲಗ್ಗೆಯಿಟ್ಟು ಬೆಳೆ ಹಾನಿ ಮಾಡಿದೆ. ಹೆಮ್ಮಾಡಿಯ ಬೇರೆಡೆಯೂ ಕೂಡ ಹೂಗಳ ಅರಳುವಿಕೆ ಕಮ್ಮಿಯಾಗಿದೆ. ಹೀಗಾದರೆ ಘಾಟಿ ಸೇವಂತಿಗೆ ನಮ್ಮ ಮಾರುಕಟ್ಟೆ ಆಕ್ರಮಿಸುತ್ತದೆ -ಪ್ರಶಾಂತ್ ಭಂಡಾರಿ ಹೆಮ್ಮಾಡಿ ಸೇವಂತಿ ಬೆಳೆಗಾರ https://www.vijayavani.net/construction-of-a-canteen-for-a-government-school https://www.vijayavani.net/allegations-of-encroachment-of-government-land

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net