ಸಾಲಗಾರರ ರಕ್ಷಣೆಗೆ ಸಹಾಯವಾಣಿ: ಅಖಿಲ ಭಾರತ ಹಣಕಾಸು ಒಕ್ಕೂಟದಿಂದ ಉಚಿತ ಕಾನೂನು ನೆರವು

borrowers
Published on

ಬೆಂಗಳೂರು: ಸಾಲಗಾರರ ರಕ್ಷಣೆ ಹಾಗೂ ರೈತರ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ಅಖಿಲ ಭಾರತ ಹಣಕಾಸು ಸಾಲಗಾರರ ಒಕ್ಕೂಟವು ಹೊರತಂದಿರುವ ನೂತನ ಸಹಾಯವಾಣಿ ಸಂಖ್ಯೆಗೆ (08045888789) ಚಾಲನೆ ನೀಡಲಾಯಿತು. ಇದೇ ವೇಳೆ ಸಾಲಗಾರರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಯಿತು.

ಎಫ್​​​ಕೆಸಿಸಿಐ  ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಬಲೀಕರಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಉದ್ಘಾಟಿಸಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಂದಾಜು 75 ಕೋಟಿ ಸಾಲಗಾರರಿದ್ದಾರೆ. ದಬ್ಬಾಳಿಕೆ ಮೂಲಕ ಸಾಲ ವಸೂಲಿ ಮಾಡುವ ಕ್ರಮವನ್ನು ಸರ್ಕಾರ ತಡೆಯಬೇಕಿದೆ. ಸಾಲ ತೆಗೆದುಕೊಂಡು ಉದ್ಯಮ ಆರಂಭಿಸುವುದರಿಂದ ದೇಶ ಅಭಿವೃದ್ಧಿಗೊಳ್ಳಲಿದೆ. ಸಾಲ ಪಡೆದವರಿಗೆ ಕಾನೂನು ನೆರವು ಸೇರಿ ಇತರ ಬಗೆಯ ಸಹಾಯದ ಅವಶ್ಯಕತೆ ಬೇಕಿದೆ. ಅಂತಹವರ ರಕ್ಷಣೆಗೆ ಒಕ್ಕೂಟವೂ ಬರುವಂತಾಗಲಿ ಎಂದು ಆಶಿಸಿದರು.

ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಎಂಎಲ್ಸಿ ದಯಾನಂದ ರೆಡ್ಡಿ ಮಾತನಾಡಿ, 2024ರಲ್ಲಿ ಒಕ್ಕೂಟವನ್ನು ಸ್ಥಾಪಿಸಲಾಯಿತು. ಸಾಲ ವಿಚಾರ ಕುರಿತು ನಿರಂತರವಾಗಿ ಅಧ್ಯಯನ ನಡೆಸಿದ್ದೇವೆ. ತಜ್ಞರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ದೇಶದಲ್ಲಿ ಪ್ರತಿ ನಿತ್ಯ ಸರಾಸರಿ 48 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್ ಸೇರಿ ಇತರ ಕಡೆಗಳಲ್ಲಿ ಪಡೆದಿರುವ ಸಾಲಗಾರರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಉತ್ಪಾದಕರ ವಲಯದಲ್ಲಿ ಅಧಿಕ ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತಿದೆ. ಸಾಲದ ಹೆಸರಿನಲ್ಲಿ ಬ್ಯಾಂಕ್‌ಗಳು ಮೋಸ ಮಾಡುತ್ತಿವೆ. ಹಾಗಾಗಿ, ಇದೆಲ್ಲವನ್ನು ತಡೆಯಲು ಹಾಗೂ ಸಾಲಗಾರರ ಪ್ರಗತಿಗೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಮನವಿ ಮಾಡಿದರು.

ಬ್ಯಾಂಕಿನಲ್ಲಿ ಸಾಲ ಪಡೆಯುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಾಲಗಾರರು ವೈಯಕ್ತಿಕ ಖಾತರಿಯ ( ಪರ್ಸನಲ್ ಗ್ಯಾರಂಟಿ) ಸಹಿ ಹಾಕಬಾರದು. ಸಾಲಗಾರರ ರಕ್ಷಣೆಗೆ ಸರ್ಕಾರದಿಂದ ಏನೆಲ್ಲಾ ಕ್ರಮವಾಗಬೇಕಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದು, ಕೇಂದ್ರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಈ ಅಂಶವನ್ನು ಸೇರಿಸಿದ್ದೇವೆ. ಬ್ಯಾಂಕ್‌ನವರು ಆಸ್ತಿ ಜಪ್ತಿ ಮಾಡದಂತೆ ಕಾನೂನು ತರಬೇಕಿದೆ ಎಂದು ದಯಾನಂದ ಒತ್ತಾಯಿಸಿದರು. ಎಫ್​​​ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಜಿಲ್ಲಾ ನಿವೃತ್ತ ನ್ಯಾಯಾಧೀಶ ಸಿ.ಆರ್.ಬೆನಕನಹಳ್ಳಿ ಸೇರಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಸ್ಯೆ ಹೇಳಿಕೊಳ್ಳಲು ಅವಕಾಶ: ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಪಾವತಿಸಲಾಗದೆ ಒದ್ದಾಡುತ್ತಿರುವವರು, ಸುಸ್ತಿದಾರರು ಮತ್ತು ೈನಾನ್ಸಿಯಲ್ ಸಂಸ್ಥೆಗಳಿಂದ ಕಿರುಕುಳ ಅನುಭವಿಸುತ್ತಿರುವರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು. ಸಾಲಗಾರರ ಸಮಸ್ಯೆ ಆಲಿಸುವ ಸಲುವಾಗಿ ಒಕ್ಕೂಟ 25 ಮಂದಿಯನ್ನು ನೇಮಿಸಿದೆ. ಅವರು ಸಮಸ್ಯೆ ಆಲಿಸಿ ಅದನ್ನು ಒಕ್ಕೂಟದ ಕಾನೂನು ತಂಡಕ್ಕೆ ವರ್ಗಾಯಿಸಲಿದ್ದಾರೆ. ಕಾನೂನು ನೆರವು ಸೇರಿ ಇತರ ಸಹಾಯವನ್ನು ಆ ತಂಡ ಉಚಿತವಾಗಿ ನೀಡಲಿದೆ. ದೇಶಾದ್ಯಂತ 24*7 ಅವಧಿಯಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net