ವಿಜಯವಾಣಿ ಸುದ್ದಿಜಾಲ ಹೆಬ್ರಿ
ಚಾರ ಗ್ರಾಮದ ನವೋದಯದ ಬಳಿ ಕುಡಿಯುವ ನೀರಿನ ಕಿಂಡಿ ಅಣೆಕಟ್ಟಿನಿಂದ ಎಚ್.ಧನಂಜಯ ಶೆಟ್ಟಿ ಎಂಬುವರು ಅನಧಿಕೃತವಾಗಿ ಪೈಪ್‌ಲೈನ್ ಮಾಡುತ್ತಿರುವುದನ್ನು ತಡೆಯಲು ಚಾರ ಗ್ರಾಮ ಪಂಚಾಯಿತಿಯ ಸದಸ್ಯರ ನಿಯೋಗ ಪಿಡಿಒ ಹಾಗೂ ಅಧ್ಯಕ್ಷರಿಗೆ ಸೋಮವಾರ ಮನವಿ ಸಲ್ಲಿಸಿದೆ.
ಯಾವುದೇ ಪರವಾನಗಿ ಪಡೆಯದೆ ಕೆಲಸ ಮಾಡುತ್ತಿರುವುದರಿಂದ ಅದನ್ನು ನಿಲ್ಲಿಸುವಂತೆ ಮನವಿ ಸಲ್ಲಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಹಾಗೂ ಪಂಚಾಯಿತಿ ಕ್ರಮ ಕೈಗೊಳ್ಳಬೇಕು. ಈ ರೀತಿಯ ಪೈಪ್‌ಲೈನ್‌ಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಪರಿಣಾಮ ಬೀರುತ್ತದೆ ಎಂದು ದೂರಿದ್ದಾರೆ.
ಗ್ರಾಪಂ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ಪ್ರತಿಕ್ರಿಯಿಸಿ, ಈಗಾಗಲೇ ಸಂಬಂಧಪಟ್ಟವರಿಗೆ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದೇವೆ. ರಜಾದಿನಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪಂಚಾಯಿತಿ ಸಾಮಾನ್ಯ ಸಭೆ ಆಗುವವರೆಗೆ ಕೆಲಸ ಮಾಡಬಾರದೆಂದು ತಿಳಿಸಿದ್ದೇವೆ. ಎರಡು ಸಲ ಕಾಮಗಾರಿ ನಿಲ್ಲಿಸಿದ್ದೆವು. ಪಂಚಾಯಿತಿ ಸದಸ್ಯರ ವಿರೋಧ ನಡುವೆ ಅವರು ಕಾಮಗಾರಿ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನಿಯೋಗದಲ್ಲಿ ಪಂಚಾಯಿತಿ ಸದಸ್ಯರಾದ ಕುಸುಮಾ ಪ್ರಭು, ರಾಘವೇಂದ್ರ, ಜಯಲಕ್ಷ್ಮೀ, ಸುಮಲತಾ, ನಾಗರತ್ನಾ, ಮಮತಾ ಎನ್.ಶೆಟ್ಟಿ, ಶಶಿಕಲಾ ಎಂ., ದೇವದಾಸ ಶೆಟ್ಟಿ ಇದ್ದರು.