

ನರೇಂದ್ರ ಎಸ್.ಮರಸಣಿಗೆ ಹೆಬ್ರಿ ಹೆಬ್ರಿ ಕೆಳಪೇಟೆಯಿಂದ ಚಾರ ಕ್ರಾಸ್ ತನಕ ಸುಮಾರು ಮೂರು ಕಿ.ಮೀ. ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ಸವಾಲಾಗಿದೆ. ಚಾರ ನಾಗಬ್ರಹ್ಮ ಸ್ಥಾನದ ಬಳಿ, ಹೆಬ್ರಿ ಕೇಳಪೇಟೆ, ಯೂನಿಯನ್ ಬ್ಯಾಂಕ್ ಮುಂಭಾಗ, ಚಾರ ಪಂಚಾಯಿತಿ, ಗಾಂಧಿನಗರ, ಚಾರ ಕ್ರಾಸ್‌ನಲ್ಲಿ ಬೃಹತ್ ಗಾತ್ರದ ಗುಂಡಿಗಳು ಸವಾರರನ್ನು ಹೈರಾಣಾಗಿಸಿದೆ. ಸಮಸ್ಯೆಗೆ ಯಾವುದೇ ಕ್ರಮ ವಹಿಸದೆ ಲೋಕೋಪಯೋಗಿ ಇಲಾಖೆ ಬೇಜವಾಬ್ದಾರಿ ಮೆರೆದಿದೆ. ಚಾರ ಗ್ರಾಮ ಪಂಚಾಯಿತಿ ಹಾಗೂ ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿ ಬೃಹತ್ ಗಾತ್ರದ ಗುಂಡಿಗಳಲ್ಲಿ ನೀರು ತುಂಬಿದ್ದು, ವಾಹನಗಳು ಸಂಚರಿಸುವಾಗ ಸಾರ್ವಜನಿಕರು, ಶಾಲಾ ಮಕ್ಕಳಿಗೆ ಕೆಸರಿನ ಸಿಂಚನವಾಗುತ್ತದೆ. ಪಂಚಾಯಿತಿ ಮುಂಭಾಗದಲ್ಲೇ ಬೃಹತ್ ಗಾತ್ರದ ಗಂಡಿಗಳು ನಿರ್ಮಾಣವಾಗಿದ್ದರೂ ಪಂಚಾಯಿತಿಯೂ ಕಣ್ಮುಚ್ಚಿ ಕುಳಿತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಪಂಚಾಯಿತಿ ಆಡಳಿತ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದ್ವಿಚಕ್ರ ಸವಾರರಿಗೆ ಸವಾಲು: ಕೆಲವು ಕಡೆ ಗುಂಡಿಗಳನ್ನು ಅಂದಾಜಿಸಲೂ ಸಾಧ್ಯವಾಗದಷ್ಟು ಬೃಹತ್ ಆಗಿವೆ. ದ್ವಿಚಕ್ರ ವಾಹನ ಸವಾರರು ಇಲ್ಲಿ ಸ್ವಲ್ಪ ನಿಯಂತ್ರಣ ತಪ್ಪಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ. ಅನೇಕ ಕಡೆ ರಸ್ತೆಯಲ್ಲಿ ನೀರು ಹರಿದು ಗುಂಡಿ ನಿರ್ವಾಣ ಆಗಿದೆ. ಕನಿಷ್ಠ ಪಕ್ಷ ತೇಪೆ ಕಾಮಗಾರಿಯನ್ನಾದರೂ ಮಾಡಿ ರಸ್ತೆ ಗುಂಡಿಗಳನ್ನು ಮುಚ್ಚಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಈ ಭಾಗದ ನಾಗರಿಕು ಆಗ್ರಹಿಸಿದ್ದಾರೆ.
ಚರಂಡಿ ದುರಸ್ತಿ ಮಾಡದಿರುವುದೇ ರಸ್ತೆ ಹಾಳಾಗಲು ಕಾರಣವಾಗಿದೆ. ಚಾರದ ಪ್ರಮುಖ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ತೀರಾ ಹದಗೆಟ್ಟಿದ್ದರೂ ಯಾಕೆ ಇನ್ನೂ ದುರಸ್ತಿ ಮಾಡುತ್ತಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಮಳೆ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು, ದುರಸ್ತಿ ಕಾರ್ಯ ನಡೆಸಬಹುದು. ಗುಂಡಿಗಳಿಂದ ಅವಘಡ ಸಂಭವಿಸಿದರೆ ಸಂಬಂಧಪಟ್ಟ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಹದಗೆಟ್ಟಿರುವ ರಸ್ತೆಯ ಬಗ್ಗೆ ಸಾರ್ವಜನಿಕರು ಪಂಚಾಯಿತಿಯನ್ನು ದೂರುತ್ತಿದ್ದಾರೆ. ಆದರೆ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದ್ದು, ದುರಸ್ತಿ ಮಾಡುವಂತೆ ನಾವೂ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ ಸ್ಪಂದನೆ ಸಿಕ್ಕಿಲ್ಲ. ಬೃಹತ್ ಗಾತ್ರದ ಗುಂಡಿಗಳಿಂದ ಪ್ರಾಣಕ್ಕೆ ಕುತ್ತು ಬರಬಹುದು. ಸಂಬಂಧಪಟ್ಟವರು ಶ್ರೀದಲ್ಲಿ ರಸ್ತೆ ದುರಸ್ತಿ ವಾಡಬೇಕು. ದಿನೇಶ್ ಶೆಟ್ಟಿ ಹುತ್ತುರ್ಕೆ, ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ
ಪ್ರತಿ ವರ್ಷ ಈ ರಸ್ತೆಯಲ್ಲಿ ಸಮಸ್ಯೆ ಇದ್ದಿದ್ದೆ. ಸಂಬಂಧಪಟ್ಟವರು ಶಾಶ್ವತ ಕಾಮಗಾರಿ ನಡೆಸಿ ಪರಿಹಾರ ದೊರಕಿಸಿಕೊಡಬೇಕು. ರಸ್ತೆಯಲ್ಲಿರುವ ದೊಡ್ಡ ಗುಂಡಿಗಳು ಬೈಕ್ ಸವಾರರ ಪ್ರಾಣಕ್ಕೆ ಕಂಟಕವಾಗಿವೆ. ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ದೀಕ್ಷಿತ್ ನಾಯಕ್, ಬೈಕ್ ಸವಾರ. https://www.vijayavani.net/santhosh-kharvi-president-of-kodi-ganeshotsava-committee https://www.vijayavani.net/tree-clearance-on-handadi-colony-road