ಸೂರ್ಯ ಘರ್ ಅನುಷ್ಠಾನದಲ್ಲಿ ಹೆಬ್ರಿ ಗ್ರಾಪಂ ಮಾದರಿ

Hbr 15 may 01
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಕುಟುಂಬಕ್ಕೆ ಬೇಕಾದ ವಿದ್ಯುತ್ ಉತ್ಪಾದಿಸಿ ಹೆಚ್ಚುವರಿಯಾಗಿ ಉಳಿದ ವಿದ್ಯುತನ್ನು ಮೆಸ್ಕಾಂಗೆ ಮಾರಾಟ ಮಾಡುವ ಅವಕಾಶವನ್ನು ನರೇಂದ್ರ ಮೋದಿ ಸರ್ಕಾರ ಜನತೆಗೆ ನೀಡಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಾದರಿಯಾಗಿ ಯೋಜನೆ ಅನುಷ್ಠಾನಗೊಳಿಸುವ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಹೆಬ್ರಿ ಗ್ರಾಮ ಪಂಚಾಯಿತಿಯು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅನುಷ್ಠಾನದ ಮುತುವರ್ಜಿ ವಹಿಸಿ ಅತೀ ಹೆಚ್ಚು ಘಟಕಗಳನ್ನು ಸ್ಥಾಪಿಸಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬುಧವಾರ ಹೆಬ್ರಿ ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಸವಲತ್ತು ವಿತರಣೆ, ಸೋಲಾರ್ ಮಾಹಿತಿ ಕಾರ್ಯಾಗಾರ ಮತ್ತು ಹೆಬ್ರಿ ಗ್ರಾಮ ಪಂಚಾಯಿತಿಯ ನವೀಕೃತ ಕಲಿಕಾ ಕೇಂದ್ರ ಸಭಾಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರನಾಥ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯನ್ನು ಹೆಬ್ರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅನುಷ್ಠಾನಗೊಳಿಸುತ್ತೇವೆ, ಹೆಬ್ರಿ ಗ್ರಾಮದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಟ್ಟಡ ನವೀಕೃತಗೊಳಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.

ಸೆಲ್ಕೋ ಸೋಲಾರ್ ಸಂಸ್ಥೆಯ ಡಿಜಿಎಂ ಗುರುಪ್ರಸಾದ್ ಶೆಟ್ಟಿ ಸೋಲಾರ್ ವಿದ್ಯುತ್ ಬಗ್ಗೆ ಮಾಹಿತಿ ನೀಡಿದರು. ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಹೆಬ್ರಿ ತಾಲೂಕು ಇಒ ವಿಜಯಾ, ಹೆಬ್ರಿ ಪಿಡಿಒ ಸದಾಶಿವ ಸೇರ್ವೆಗಾರ್ ಉಪಸ್ಥಿತರಿದ್ದರು. ಪ್ರಸಾದ್ ಶೆಟ್ಟಿ ನಿರೂಪಿಸಿ ವಂದಿಸಿದರು. ಪಿಡಿಒ ಸದಾಶಿವ ಸೇರ್ವೆಗಾರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net