

ಬೆಂಗಳೂರು: ಬೆಂಗಳೂರಿನಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದ ಜಿಟಿಜಿಟಿ ಮಳೆ ( Heavy Rain ) ಶುರುವಾಗಿದ್ದು, ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ದಿನನಿತ್ಯದ ಚಟುವಟಿಕೆಗಳಿಗೆ ಮಳೆರಾಯ ಕಿರಿಕಿರಿ ಮಾಡ್ತಿದ್ದಾನೆ.
ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಲು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಕೆಲಸಕ್ಕೆ ಹೋಗೋರು ಪರದಾಡುವಂತೆ ಆಗಿದೆ. ನಗರದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಬೆಳಗ್ಗೆಯೇ ಟ್ರಾಫಿಕ್ ಬಿಸಿ ತಟ್ಟಿದೆ.
ಹವಾಮಾನ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ 25.4 ° C ಮತ್ತು ಕನಿಷ್ಠ ತಾಪಮಾನ 20.7 ° C ಮತ್ತು 3.3 ಮಿಮೀ ಮಳೆ ದಾಖಲಾಗಿದೆ. ಇದಲ್ಲದೆ, ಹವಾಮಾನ ವೀಕ್ಷಕರು ರಾಜ್ಯದ ಕೆಲವು ಭಾಗಗಳಿಗೆ, ವಿಶೇಷವಾಗಿ ಕರಾವಳಿ ಕರ್ನಾಟಕದ ಕೆಲವು ಭಾಗಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ, ಭಾರೀ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಅಕ್ಟೋಬರ್ 14 ರಿಂದ ಅಕ್ಟೋಬರ್ 17 ರವರೆಗೆ ಗಣನೀಯ ಪ್ರಮಾಣದ ಮಳೆಯಾಗುತ್ತದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆಯ ಮುನ್ಸೂಚನೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಮೇಲಿನ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಹಾಗೂ ಅಕ್ಟೋಬರ್ 17ರಂದು ಆರೆಂಜ್ ಅಲರ್ಟ್ ಘೋಷಣೆ ಇದೆ.