ಮುಂಬೈನಲ್ಲಿ ಭಾರೀ ಮಳೆ: ರಸ್ತೆಗಳು ಸಂಪೂರ್ಣ ಜಲಾವೃತ, ರೈಲು, ವಿಮಾನ ಸಂಚಾರಕ್ಕೆ ಅಡ್ಡಿ!| Heavy Rains

photo-42-68a4660460115
Published on

Heavy Rains: ಮುಂಬೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರಾದ್ಯಂತ ರಸ್ತೆಗಳು ಸಂಪೂರ್ಣ ಜಲಾವೃತ್ತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ, ರೈಲು ಸೇರಿದಂತೆ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ.

ನಗರ ಸಂಚಾರ ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರವಾಹದಿಂದಾಗಿ ವಾಹನ ಸವಾರರು ಹಾಗೂ ಪದಾಚಾರಿಗಳು ರಸ್ತೆಗಳಲ್ಲಿ ಸಂಚರಿಸುಲು ಹೆಣಗಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ನೀರಿನ ಮಟ್ಟ ಮತ್ತಷ್ಟು ಹೆಚ್ಚಾದರೆ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನದಿ ದಂಡೆಯ ಬಳಿ ವಾಸಿಸುವ ಜನರನ್ನು ಸ್ಥಳಾಂತರಿಸಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ವಿಮಾನ, ರೈಲು ಸೇವೆಗಳಲ್ಲಿ ವ್ಯತ್ಯಯ

ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಕನಿಷ್ಠ 14 ವಿಮಾನಗಳು ತಮ್ಮ ಲ್ಯಾಂಡಿಂಗ್ ಅನ್ನು ರದ್ದುಗೊಳಿಸಿದ್ದು, ಪ್ರತಿಕೂಲ ಹವಾಮಾನದಿಂದಾಗಿ 5 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು ಎಂದು ವಿಮಾನಯಾನ ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಯಾಣಿಕರಿಗೆ ಸಲಹೆಗಳನ್ನು ನೀಡಿವೆ.

ಕೇಂದ್ರ ರೈಲ್ವೆಯ ಪ್ರಕಾರ, ಕೇಂದ್ರ ಮಾರ್ಗದಲ್ಲಿ ಸ್ಥಳೀಯ ರೈಲು ಸೇವೆಗಳು 10 ನಿಮಿಷ ಮತ್ತು ಬಂದರು ಮಾರ್ಗದಲ್ಲಿ ಸುಮಾರು ಐದು ನಿಮಿಷ ವಿಳಂಬವಾಗುತ್ತವೆ. ಪಶ್ಚಿಮ ಮಾರ್ಗದಲ್ಲಿ ರೈಲು ಸೇವೆಗಳು ಸುಮಾರು 15 ನಿಮಿಷಗಳ ಕಾಲ ವಿಳಂಬವಾಗುತ್ತವೆ ಎಂದು ಪಶ್ಚಿಮ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

IMD ಎಚ್ಚರಿಕೆ

ಭಾರತ ಹವಾಮಾನ ಇಲಾಖೆ (ಐಎಂಡಿ) ಇಂದು ಮುಂಬೈ ಮತ್ತು ಹತ್ತಿರದ ಪ್ರದೇಶಗಳಲ್ಲಿ 'ರೆಡ್' ಅಲರ್ಟ್ ನೀಡಿದೆ."ಮುಂದಿನ ಮೂರರಿಂದ ನಾಲ್ಕು ಗಂಟೆಗಳಲ್ಲಿ ಮುಂಬೈ, ಥಾಣೆ, ಪಾಲ್ಘರ್, ರಾಯಗಢ, ಪುಣೆಯ ಘಟ್ಟಗಳ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40-50 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ" ಎಂದು ಹವಾಮಾನ ಇಲಾಖೆ ತಿಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net