ಬೆಂಗಳೂರು: ಮಾನ್ಸೂನ್ ಬಿರುಸು ಪಡೆದ ಪರಿಣಾಮ ಕರಾವಳಿ, ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ತೀವ್ರವಾಗಿ ಮಳೆಯಾಗುತ್ತಿದ್ದು, ಮುಂದಿನ ಐದು ದಿನ ಇನ್ನಷ್ಟು ರಭಸವಾಗಿ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡದ ಕಾರವಾರದಲ್ಲಿ 374 , ಕೋಟಾ 190, ಗೋಕಾರ್ಣ 148, ಅಂಕೋಲಾ 147, ಬಾಗಲಕೋಟೆಯ ಕೆರೂರು 160, ಹುಬ್ಬಳ್ಳಿ 150, ಶಿವಮೊಗ್ಗ ಆಗುಂಬೆ 100 ಮಿಮೀ ಮಳೆ ಸುರಿದಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಜೂ.13ರಿಂದ ಜೂ.17ರವರೆಗೆ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ಈ ಅವಧಿಯಲ್ಲಿ 204 ಮಿಮೀವರೆಗೆ ಮಳೆಯಾಗುವ ಸಂಭವ ಇದೆ.
ಸಮುದ್ರದಲ್ಲಿ ಎತ್ತರದ ಅಲೆ ಎದ್ದಿರುವ ಕಾರಣದಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಹಾವೇರಿ, ಬೆಳಗಾವಿ,ಧಾರವಾಡದಲ್ಲಿಯೂ ಜೂ.13ರಂದು ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಕೊಡಲಾಗಿದೆ. ಈ ಜಿಲ್ಲೆಗಳಲ್ಲಿ ಜೂ.14ರಿಂದ ಮುಂದಿನ 3 ದಿನ ಆರೆಂಜ್ ಅಲರ್ಟ್ ಇರಲಿದೆ.
ಮೈಸೂರು, ಹಾಸನ, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಗದಗದಲ್ಲಿ ಮುಂದಿನ 2 ದಿನ ಧಾರಾಕಾರವಾಗಿ ಮಳೆಯಾಗಲಿರುವ ಕಾರಣಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳ, ರಾಯಚೂರು, ಚಿತ್ರದುರ್ಗ, ವಿಜಯನಗರದಲ್ಲಿ ಜೂ.13ರಿಂದ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಇರಲಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಕೋಲಾರ, ಯಾದಗಿರಿ, ಕಲಬುರಗಿಯಲ್ಲಿ ಮುಂದಿನ 4 ದಿನ ಸಾಧಾರಣ ಮಳೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.