ರಾಜಧಾನಿಯಲ್ಲಿ ಇಂದಿನಿಂದ ಧಾರಾಕಾರ ಮಳೆ: ಯೆಲ್ಲೋ ಅಲರ್ಟ್ ನೀಡಿಕೆ

rain (3)
Published on

ಬೆಂಗಳೂರು: ಕೆಲ ದಿನಗಳ ಬಳಿಕ ರಾಜಧಾನಿಯಲ್ಲಿ ಭಾನುವಾರ ಧಾರಾಕಾರ ಮಳೆ ಬಿದ್ದಿದೆ. ಶಾಂತಿನಗರದ ವನ್ನರ್‌ಪೇಟೆಯಲ್ಲಿ 13 ಮಿ.ಮೀ. ಸುರಿದ್ದು, ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಆಗಾಗ್ಗೆ ಮಳೆ ಬಂತು. ಮಧ್ಯಾಹ್ನ ಮತ್ತು ಸಂಜೆ ವೇಳೆ ಕೆಲ ಪ್ರದೇಶಗಳಲ್ಲಿ ಬಿರುಸಾಗಿತ್ತು. ತಡರಾತ್ರಿವರೆಗೂ ಮಳೆ ಹನಿಗಳು ಜಿನುಗುತ್ತಿತ್ತು.

ನಗರದ ಪ್ರಮುಖ ಜಂಕ್ಷನ್, ಅಂಡರ್‌ಪಾಸ್‌ಗಳಲ್ಲಿ ಮಳೆನೀರು ನಿಂತಿತ್ತು. ಪರಿಣಾಮ ವಾಹನಗಳು ನಿಧಾನ ಗತಿಯಲ್ಲಿ ಸಾಗಿದವು. ಕೆಲ ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ತುಸು ಸಂಚಾರ ಸಿಕ್ಕು ಉಂಟಾಯಿತು. ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಇಲ್ಲದೆ ನಷ್ಟ ಅನುಭವಿಸಿದರು. ಕೃಷ್ಣರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ, ಕೆಂಗೇರಿ, ಚಾಮರಾಜಪೇಟೆ, ಬಸವನಗುಡಿ, ಆರ್.ಟಿ. ನಗರ, ಬಿಟಿಎಂ ಲೇಔಟ್, ಕೆ.ಆರ್.ಪುರ, ಸಹಕಾರನಗರ, ಜಯನಗರ, ಬಸವನಗುಡಿ, ಹನುಮಂತನಗರ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ದಾಸರಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ ವೈಟ್‌ಫೀಲ್ಡ್ ಹಾಗೂ ಸರ್ಜಾಪುರ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯಾಯಿತು.

ರಸ್ತೆಗುಂಡಿ ಕಾರುಬಾರು: ಮಳೆಯಿಂದಾಗಿ ರಾಜಧಾನಿಯಲ್ಲಿ ಮತ್ತೆ ರಸ್ತೆಗುಂಡಿಗಳ ಕಾರುಬಾರು ಶುರುವಾಗಿದೆ. ಇದರಿಂದ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದಿದೆ. ಪ್ರತಿ ರಸ್ತೆಯಲ್ಲಿ ಕನಿಷ್ಠ ನಾಲ್ಕೈದು ಗುಂಡಿ ದರ್ಶನವಾಗುತ್ತದೆ. ಅಡ್ಡರಸ್ತೆಗಳು, ಗಲ್ಲಿಗಳಲ್ಲಿನ ಇಕ್ಕಟ್ಟಾದ ಹಾದಿ ತುಂಬ ಹದಗೆಟ್ಟಿವೆ. ಈಗಾಗಲೇ ಮುಚ್ಚಿರುವ ಗುಂಡಿಗಳು ಹಾಗೂ ರಸ್ತೆಗಳಿಗೆ ಹಾಕಿರುವ ಡಾಂಬರ್ ಕಿತ್ತು ಬರುತ್ತಿವೆ. ಕೆಲ ರಸ್ತೆಗಳಿಗೆ ಡಾಂಬರ್ ಹಾಕಿದರೆ ಹೊರತು ಬಹುತೇಕ ರಸ್ತೆಗಳು ಹಾಳಾಗಿವೆ. ಪ್ರತಿನಿತ್ಯ ಪ್ರಾಣಭಯದಲ್ಲೇ ಸವಾರರು ವಾಹನ ಚಲಾಯಿಸುತ್ತಿದ್ದಾರೆ.

ಇಂದಿನಿಂದ ಜೋರು ಬೆಂಗಳೂರು ನಗರದಲ್ಲಿ ಸೋಮವಾರದಿಂದ ಬುಧವಾರದವರೆಗೆ (ಆ.4ರಿಂದ 6) ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಈ ಅವಧಿಯಲ್ಲಿ ಕೆಲ ಪ್ರದೇಶಗಳಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಮತ್ತು 21 ಡಿ.ಸೆ. ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net