ಬಿರುಸಿನ ವರ್ಷಧಾರೆಗೆ ಮಂಗಳೂರು ನಗರ ಅಧ್ವಾನ ಪಂಪ್‌ವೆಲ್ ಹೆದ್ದಾರಿಯಲ್ಲಿ ನೆರೆ, ತಗ್ಗು ಪ್ರದೇಶಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Mng-may25-pumpwell3
Published on

ಮಂಗಳೂರು: ಮಂಗಳೂರು ನಗರ ಹಾಗೂ ಸುತ್ತಮುತ್ತ ಭಾನುವಾರ ಎಡಬಿಡದೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿದೆ. ಅಲ್ಲಲ್ಲಿ ಮರಗಳು, ತಡೆಗೋಡೆಗಳು ಕುಸಿದು ಬಿದ್ದಿದೆ. ಪಂಪ್‌ವೆಲ್ ಮೇಲ್ಸೇತುವೆ ಅಡಿಯಲ್ಲಿ ಮಳೆ ನೀರು ತುಂಬಿ ವಾಹನಗಳು ಪರದಾಟ ನಡೆಸಿದವು.

ಪಂಪ್‌ವೆಲ್‌ನಲ್ಲಿ ಭಾರಿ ಮಳೆಗೆ ರಾಜ ಕಾಲುವೆಯಲ್ಲಿ ಸರಾಗವಾಗಿ ನೀರು ಹರಿದು ಹೋಗದೆ ರಸ್ತೆಯಲ್ಲಿ ತುಂಬಿದೆ. ಇದರಿಂದ ದಿನವಿಡೀ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಆಟೋ ರಿಕ್ಷಾ, ದ್ವಿಚಕ್ರ ವಾಹನ ಸವಾರರು ಸಂಗ್ರಹಗೊಂಡಿದ್ದ ನೀರಿನಲ್ಲೇ ವಾಹನಗಳನ್ನು ತಳ್ಳಿಕೊಂಡು ಸಾಗುವ ದೃಶ್ಯ ಕಂಡು ಬಂತು. ಕಾಲುವೆಯಲ್ಲಿ ತುಂಬಿದ ಹೂಳನ್ನು ತೆಗೆದು ಬದಿಯಲ್ಲಿ ಹಾಕಿದ್ದು ಮತ್ತೆ ನೇರವಾಗಿ ಮಳೆಯಿಂದಾಗಿ ಕಾಲುವೆಗೆ ಬಿದ್ದ ಪರಿಣಾಮ ಮಳೆ ನೀರು ಸರಾಗ ಹರಿವಿಗೆ ಅಡಚಣೆಯಾಯಿತು.

ಕಾವೂರು ಮುಲ್ಲಕಾಡಿನ ಶ್ರೀರಾಮಭಜನಾ ಮಂದಿರ ಹತ್ತಿರದ ಸುಮಂತ್ ಎನ್ನುವವರ ಮನೆಗೆ ಮರವೊಂದು ಬಿದ್ದಿದೆ. ಬಿಜೈಯ ಬಿ.ಆರ್. ಸುವರ್ನ ಆರ್ಕೆಡ್ ಬಳಿಯಲ್ಲಿ ಮರವೊಂದು ಅಂಗಡಿಯ ಮೇಲೆ ಉರುಳಿ ಬಿದ್ದಿದೆ. ಪಾಂಡೇಶ್ವರ ಪೊಲೀಸ್ ಲೈನ್‌ನ ದೇವಿ ದೇವಸ್ಥಾನದ ಬಳಿಯಲ್ಲಿ ಮರವೊಂದು ಉರುಳಿ ಬಿದ್ದು ಹಾನಿಯಾಗಿದೆ. ಅಡುಮರೋಳಿ ಮಾರಿಕಾಂಬ ದೇವಸ್ಥಾನದ ಬಳಿ ಗುಡ್ಡವೊಂದು ಜರಿದು ಬಿದ್ದಿದೆ. ಶಕ್ತಿನಗರದ ಆರೋಗ್ಯ ಕೇಂದ್ರದ ಬಳಿಯಲ್ಲಿ ನೀರಿನ ಟ್ಯಾಂಕ್ ಮೇಲೆ ಗುಡ್ಡವೊಂದು ಕುಸಿತವಾಗಿದೆ.

ಲೇಡಿಹಿಲ್ ಉರ್ವ ಚರ್ಚಿನ ಸ್ಮಶಾನದಲ್ಲಿ ಮರವೊಂದು ಬಿದ್ದು ಆವರಣ ಗೋಡೆ ಕುಸಿದು ಬಿದ್ದಿದೆ. ಕುಂಟಿಕಾನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹತ್ತಿರ ಮರವೊಂದು ಬಿದ್ದಿದೆ. ಬಿಜೈ ಪ್ರೇಮನಗರದಲ್ಲಿ ಮಳೆ ನೀರು ನುಗ್ಗಿದೆ. ಕಂಕನಾಡಿಯ ಸುವರ್ಣ ರೋಡ್‌ನ ಏಳನೇ ಕ್ರಾಸ್‌ನಲ್ಲಿ ಮಳೆ ನೀರು ನಿಂತು ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಸ್ಟೇಟ್ ಬ್ಯಾಂಕ್ ಸಮೀಪ ಸೈಂಟ್ ಆನ್ಸ್ ಶಾಲೆಯ ಹಿಂಭಾಗದ ಆವರಣ ಗೋಡೆ ಕುಸಿದು ಮುಖ್ಯ ರಸ್ತೆಗೆ ಬಿದ್ದಿದೆ. ಅಂಬೇಡ್ಕರ್ ವೃತ್ತ, ಕೆ.ಎಸ್.ರಾವ್ ರಸ್ತೆ, ಜಿ.ಎಚ್.ಎಸ್. ರಸ್ತೆ, ಸ್ಟೇಟ್‌ಬ್ಯಾಂಕ್, ಕದ್ರಿ ಕಂಬಳ, ಕಂಕನಾಡಿ, ಫಳ್ನೀರ್, ಬೋಂದೆಲ್ ಮೊದಲಾದ ಕಡೆ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ತಗ್ಗು ಪ್ರದೇಶ ಜಲಾವೃತ: ನಗರದ ವಿವಿಧ ಕಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಪಿವಿಎಸ್ ವೃತ್ತದ ಬಳಿ ಇರುವ ಹೊಟೇಲೊಂದಕ್ಕೆ ನೀರು ನುಗ್ಗಿದೆ. ಕೊಡಿಯಾಲಬೈಲ್‌ನಲ್ಲಿ ಪ್ರತಿ ವರ್ಷವೂ ಮನೆಗೆ ನೀರು ನುಗ್ಗಿದಂತೆ ಈ ಬಾರಿಯೂ ಆರಂಭದ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಮುಳುಗಿದ ಕಾರಣ ಸಂಪರ್ಕವೂ ಕಡಿತಗೊಂಡಿತು. ಕದ್ರಿ ಬಟ್ಟಲ್‌ನಲ್ಲಿ ನೀರು ಹರಿದು ಹೋಗದೆ ರಸ್ತೆ ಹಾಗೂ ಸಮೀಪದ ಮನೆಯಂಗಳಕ್ಕೆ ಹರಿದು ಅಧ್ವಾನ ಸೃಷ್ಟಿಯಾಯಿತು.

ಪಚ್ಚನಾಡಿಯಲ್ಲಿ ಮರ ಬಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಕಾವೂರುನಲ್ಲೂ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಮೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸರಿಪಡಿಸಿದರು. ಉರ್ವದಲ್ಲಿ ಮರ ಬಿದ್ದು, ಸಂಭಾವ್ಯ ಅನಾಹುತ ತಪ್ಪಿದೆ. ನಗರದಾದ್ಯಂತ ರಸ್ತೆಗಳಲ್ಲೇ ಮಳೆ ನೀರು ಹರಿದು ಬಂದ ಕಾರಣ ಕಲ್ಲು, ಮಣ್ಣು ರಸ್ತೆಗಳಲ್ಲಿ ಶೇಖರಣೆಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸುರತ್ಕಲ್, ಪಣಂಬೂರು, ಕಾವೂರು, ಬಜಪೆ ಮೊದಲಾದ ಕಡೆಗಳಲ್ಲೂ ವ್ಯಾಪಕವಾಗಿ ಸುರಿದ ಮಳೆಗೆ ತೊಂದರೆ ಅನುಭವಿಸಿದರು.

ಜನ ಸಂಚಾರ ವಿರಳ: ಬೆಳಗ್ಗೆಯಿಂದಲೇ ಸುರಿದ ಭಾರಿ ಮಳೆಗೆ ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ಸಾಮಾನ್ಯವಾಗಿ ಭಾನುವಾರ ಮಧ್ಯಾಹ್ನದ ಬಳಿಕ ನಗರದಲ್ಲಿ ಜನದಟ್ಟಣೆ ಕಂಡು ಬರುತ್ತದೆ. ಆದರೆ ಮಳೆಯ ಕಾರಣದಿಂದಾಗಿ ಹೆಚ್ಚಿನ ಮಂದಿ ಮನೆಯಲ್ಲೇ ಉಳಿದರು. ಹೊಟೇಲ್‌ಗಳಲ್ಲೂ ಗ್ರಾಹಕರ ಸಂಖ್ಯೆ ಕಡಿಮೆ ಕಂಡು ಬಂತು.

ನಾಡದೋಣಿ ಮೀನುಗಾರಿಕೆ ಸ್ಥಗಿತ: ಹವಾಮಾನ ಇಲಾಖೆ ನೀಡಿದ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಆಳಸಮುದ್ರ ಮಾತ್ರವಲ್ಲದೆ, ನಾಡದೋಣಿ ಮೀನುಗಾರಿಕೆಯೂ ಸ್ಥಗಿತವಾಗಿತ್ತು. ರಭಸವಾದ ಗಾಳಿ ಹಾಗೂ ಮಳೆ ಹಿನ್ನೆಲೆಯಲ್ಲಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net