ಭಾರಿ ಮಳೆ: ದೆಹಲಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 15 ವಿಮಾನಗಳ ಮಾರ್ಗ ಬದಲಾವಣೆ| Flights Divert

ವಿಜಯವಾಣಿ
Published on

Flights Divert: ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಅ. 07) ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ 15 ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಎಂಟು ವಿಮಾನಗಳನ್ನು ಜೈಪುರಕ್ಕೆ, ಐದು ವಿಮಾನಗಳನ್ನು ಲಖನೌಗೆ ಹಾಗೂ ಎರಡು ವಿಮಾನಗಳನ್ನು ಚಂಡೀಗಢಕ್ಕೆ ತಿರುಗಿಸಲಾಗಿದೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಇಂದು ಬೆಳಗಿನ ಜಾವದಿಂದ ಆರಂಭವಾದ ತುಂತುರು ಮಳೆ ಸಂಜೆಯೊತ್ತಿಗೆ ಧಾರಕಾರವಾಗಿ ಸುರಿದಿದೆ. ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ವಿಮಾನಗಳ ಮಾರ್ಗ ಬದಲಾವಣೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ದೆಹಲಿ ಏರ್​ಪೋರ್ಟ್ ಅಧಿಕಾರಿಗಳು, ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ, ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಬಹುದು. ಪ್ರಯಾಣಿಕರಿಗೆ ಸುಗಮ ಮತ್ತು ಪರಿಣಾಮಕಾರಿ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆನ್-ಗ್ರೌಂಡ್ ತಂಡಗಳು ಎಲ್ಲಾ ಪಾಲುದಾರರೊಂದಿಗೆ ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಎರಡು ದಿನಗಳ ಹಿಂದೆಯೇ ಈ ದಿನ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಯಲ್ಲೋ ಮತ್ತು ಆರಂಜ್ ಅಲರ್ಟ್​ ಘೋಷಣೆ ಮಾಡಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net