

ಮಡಿಕೇರಿ
ಕಾವೇರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಬೇಕು ಎಂದರೆ ಭಾಗಮಂಡಲ ಸುತ್ತಮುತ್ತಲಿನ ಪ್ರದೇಶ ಮತ್ತು ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗಬೇಕು. ಈ ಭಾಗದಲ್ಲಿ ಮಳೆ ಚೆನ್ನಾಗಿ ಆದಾಗಲೇ ಕಾವೇರಿ ಕೊಳ್ಳದಲ್ಲಿ ನಗು ಅರಳುತ್ತದೆ. ಆದರೆ ಇಂಥ ಜೋರು ಮಳೆಯೇ ಸ್ಥಳೀಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಮಳೆಗಾಲದ ಅವಧಿ ಇಲ್ಲಿನವರಿಗೆ ಸಂಕಷ್ಟದ ದಿನಗಳಾಗಿರುತ್ತದೆ.
ಮೇಲ್ಸೇತುವೆಯಿಂದ ಅನುಕೂಲ
ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ಭಾಗಮಂಡಲ ಮೊದಲೆಲ್ಲಾ ಮಳೆಗಾಲ ಬಂತೆAದರೆ ಸಾಕು ವರ್ಷದಲ್ಲಿ 3-4 ಬಾರಿ ದ್ವೀಪವಾಗಿ ಪರಿವರ್ತನೆ ಆಗಿಬಿಡುತ್ತಿತ್ತು. ಈ ವರ್ಷ ಇಲ್ಲಿ ಮೇಲ್ಸೇತುವೆ ಬಂದಿರುವುದರಿAದ ಈಗ ಆ ಸಮಸ್ಯೆ ದೂರವಾಗಿದ್ದರೂ ಉಳಿದೆಲ್ಲಾ ತೊಂದರೆಗಳು ಹಾಗೆಯೇ ಮುಂದುವರಿದಿದೆ.
ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮ ಕ್ಷೇತ್ರವಾಗಿರುವ ಭಾಗಮಂಡಲಕ್ಕೆ ಪ್ರವಾಹ ಹೊಸದಲ್ಲವಾದರೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅನಾಹುತಗಳ ಪ್ರಮಾಣ, ಭೂಕುಸಿತ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಆರ್ಥಿಕವಾಗಿಯೂ ಈ ಪ್ರದೇಶ ಹಿಂದುಳಿದಿದ್ದು, ಭವಿಷ್ಯದ ಚಿಂತೆ ಇಲ್ಲಿನವರನ್ನು ಕಾಡುತ್ತಿದೆ. 2019ರಲ್ಲಿ ಕೋರಂಗಾಲದಲ್ಲಿ ಸಂಭವಿಸಿದ ದುರಂತ, 2020ರಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟಕುಸಿತ ಪ್ರಕರಣ ಇಲ್ಲಿನವರ ಪಾಲಿಗೆ ದುಃಸ್ವಪ್ನವಾಗಿ ಉಳಿದುಕೊಂಡಿದೆ.
ಭಾಗಮಂಡಲಕ್ಕೆ ಪ್ರವಾಹದ ನಂಟು
ಬ್ರಹ್ಮಗಿರಿಯ ಒಂದು ಬದಿಯಲ್ಲಿರುವ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿ ಚೇರಂಗಾಲ ಗ್ರಾಮದ ಮೂಲಕ ಮತ್ತು ಮತ್ತೊಂದು ಬದಿಯಲ್ಲಿ ಹುಟ್ಟುವ ಕನ್ನಿಕೆ ನದಿ ತಣ್ಣಿಮಾನಿ ಗ್ರಾಮದ ಮೂಲಕ ಹರಿದು ಬಂದು ಭಾಗಮಂಡಲದಲ್ಲಿ ಸಂಗಮವಾಗುತ್ತದೆ. ಈ ಎರಡೂ ನದಿಗಳು ಒಂದಾಗುವಲ್ಲಿ ಸುಜ್ಯೋತಿ ನದಿ ಗುಪ್ತಗಾಮಿನಿಯಾಗಿ ಸೇರಿಕೊಳ್ಳುತ್ತದೆ ಎನ್ನುವ ನಂಬಿಕೆ ಇರುವುದರಿಂದ ಈ ಸ್ಥಳ ತ್ರಿವೇಣಿ ಸಂಗಮದ ಪುಣ್ಯ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಜತೆಗೆ ಪ್ರವಾಹದ ನಂಟನ್ನೂ ಅಂಟಿಸಿಕೊAಡಿದೆ.
ಭಾಗಮಂಡಲ ಎಂದರೆ ಮೊದಲಿನಿಂದಲೂ ಮಳೆಯ ಊರು ಎಂದೇ ಪ್ರಸಿದ್ಧಿ. ಮುಂಗಾರಿನ ಅವಯಧಿಯಲ್ಲಿ ದಿನಕ್ಕೆ ಸಾವಿರ ಮಿಮೀನಷ್ಟು ಮಳೆ ಸುರಿವುದೂ ಇದೆ. ಹಾಗಾಗಿ ಈ ವ್ಯಾಪ್ತಿಗೆ ಹೆಣ್ಣು ಕೊಡಲು ಈಗಲೂ ಹೆಣ್ಣು ಹೆತ್ತವರು ಹತ್ತು ಸಲ ಯೋಚಿಸುತ್ತಾರೆ. ಮಳೆಗಾಲದಲ್ಲಿ ಇಲ್ಲಿ ಪ್ರವಾಹ, ಚಿಕ್ಕಪುಟ್ಟ ಭೂಕುಸಿತ ಸಾಮಾನ್ಯ. ಆದರೆ ಕಳೆದ 6 ವರ್ಷಗಳಿಂದ ಈಚೆಗೆ ಇಲ್ಲಿಯ ಪರಿಸ್ಥಿತಿ ಬದಲಾಗಿದೆ. ಹಿಂದೆಲ್ಲ ಏಪ್ರಿಲ್, ಮೇ ತಿಂಗಳಿನಲ್ಲಿ ಮಳೆಗಾಲಕ್ಕಿರುವ ಕಟ್ಟಿಗೆ, ಅಕ್ಕಿ, ದಿನಸಿ ಸಂಗ್ರಹಿಸಿ ಇಡಲು ಮುಂದಾಗುತ್ತಿದ್ದವರು ಈಗ ಮಳೆಗಾಲಕ್ಕೆ ಸುರಕ್ಷಿತ ಜಾಗ ಯಾವುದು ಎನ್ನುವುದರ ಬಗ್ಗೆ ತಲೆ ಕೆಡಿಸುವಂತಾಗಿದೆ.
ಆರ್ಥಿಕವಾಗಿ ಹಿಂದುಳಿದ ಪ್ರದೇಶ
ವರ್ಷದ ಬಹುತೇಕ ತಿಂಗಳು ಈ ಭಾಗದಲ್ಲಿ ಮಳೆ ಇರುವುದರಿಂದ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಇಲ್ಲಿ ಬೆಳೆಯುವುದಿಲ್ಲ. ಗಿಡಗಳಿಗೆ ರೋಗ ಬಂದು ಏಲಕ್ಕಿಯೂ ನಿರೀಕ್ಷಿಸಿದಷ್ಟು ಫಸಲು ಸಿಗುತ್ತಿಲ್ಲ. ಜೇನು ಉತ್ಪಾದನೆಯೂ ಇಳಿಕೆ ಆಗಿದೆ. ನಿರ್ವಹಣಾ ವೆಚ್ಚ ಅಧಿಕ ಆಗಿರುವುದರಿಂದ ಭತ್ತ ಕೂಡ ಬೆಳೆಯುತ್ತಿಲ್ಲ. ಹಾಗಾಗಿ ಭಾಗಮಂಡಲ ಹೋಬಳಿ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಈಗ ಪ್ರತೀ ವರ್ಷ ಪ್ರವಾಹ, ಭೂಕುಸಿತ ಸಂಭÀವಿಸುತ್ತಿರುವುದರಿAದ ಇಲ್ಲಿನವರಿಗೆ ಭವಿಷ್ಯದ ಬದುಕಿನ ಚಿಂತೆ ಕಾಡುತ್ತಿದೆ.
ಮನೆಯೊಳಗೆ ಬರುವ ನೀರು
ಭಾಗಮಂಡಲ ವ್ಯಾಪ್ತಿಯ ಭಾಗಮಂಡಲ, ಚೇರಂಗಾಲ, ಕೋರಂಗಾಲ, ಅಯ್ಯಂಗೇರಿ, ತಾವೂರು, ತಣ್ಣಿಮಾನಿ, ಸಣ್ಣಪುಲಿಕೋಟು, ಪದಕಲ್ಲು ಗ್ರಾಮಗಳು ಪ್ರವಾಹಪೀಡಿತ ಪ್ರದೇಶಗಳಾಗಿ ಗುರುತಿಸಿಕೊಂಡಿವೆ. ತಲಕಾವೇರಿಯ ಬ್ರಹ್ಮಗಿರಿ, ಕೋರಂಗಾಲ, ಚೇರಂಗಾಲ ಹಾಗೂ ಕೋಳಿಕಾಡು ಪ್ರದೇಶಗಳು ಭೂಕುಸಿತ ಪ್ರದೇಶಗಳಾಗಿ ಆತಂಕ ಹುಟ್ಟಿಸುತ್ತಿವೆ. ಮೊದಲೆಲ್ಲಾ ಭಾಗಮಂಡಲದಲ್ಲಿ ಪ್ರವಾಹ ಸಂದರ್ಭದಲ್ಲಿ ಇಷ್ಟು ಪ್ರಮಾಣದಲ್ಲಿ ಪ್ರವಾಹದ ನೀರು ಬರುತ್ತಿರಲಿಲ್ಲ. ಮಳೆಗಾಲದಲ್ಲಿ ಮನೆ ಬಿಡುವಂತಹ ಪರಿಸ್ಥಿತಿ ಕೂಡ ಇರುತ್ತಿರಲಿಲ್ಲ. ಆದರೆ 2018ರಿಂದ ಈಚೆಗೆ ಪಟ್ಟಣದ ಅಂಗಡಿ ಮತ್ತು ಮನೆಯೊಳಗೆ ಕಾವೇರಿ ನುಗ್ಗುತ್ತಿದ್ದಾಳೆ.
ನರಕ ಸದೃಶ ರಸ್ತೆ
ಭಾಗಮಂಡಲದಲ್ಲಿ ನಿರ್ಮಾಣ ಆಗಿರುವ ಮೇಲ್ಸೇತುವ ಈ ವರ್ಷದಿಂದ ಸಾರ್ವಜನಿಕ ಬಳಕೆಗೆ ಲಭ್ಯವಾಗಿರುವುದರಿಂದ ಮಳೆಗಾದಲ್ಲಿ ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿತವಾಗುತ್ತಿದ್ದ ಸಮಸ್ಯೆ ಈ ವರ್ಷ ತಪ್ಪಿದೆ. ಆದರೆ ಮೇಲ್ಸೇತುವೆಯ ಕೆಳಗಡೆ ತಿರುಗಾಡುವುದು ಸ್ಥಳೀಯರಿಗೆ ನರಕ ಯಾತನೆಯ ಅನುಭವ ಕೊಡುತ್ತಿದೆ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸÀರ್ಕಾರ ಇದ್ದ ಸಮಯದಲ್ಲಿ ಮೇಲ್ಸೇತುವೆ ಯೋಜನೆ ಪ್ರಸ್ತಾಪಕ್ಕೆ ಜೀವ ಸಿಕ್ಕಿತ್ತು. ಕಾವೇರಿ ನೀರಾವರಿ ನಿಗಮದ ವತಿಯಿಂದ 29.62 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು.
2018ರ ವರ್ಷಾಂತ್ಯಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿ ಒಂದು ವರ್ಷದಲ್ಲಿ ಸಂಚಾರಕ್ಕೆ ಲಭ್ಯವಾಗಬೇಕಿದ್ದ ಮೇಲ್ಸೇತುವೆ 2024ರಲ್ಲಿ ಜನಬಳಕೆಗೆ ಸಿಕ್ಕಿದೆ. ಪ್ರಾಕೃತಿಕ ವಿಕೋಪ, ಪ್ರವಾಹ, ಕೊರೊನಾ, ಭೂಸ್ವಾÃಧೀನ ಸಮಸ್ಯೆ ಮತ್ತಿತರ ಕಾರಣಗಳಿಂದ ಕಾಮಗಾರಿ ಕುಂಟುತ್ತಾ ನಡೆದಿತ್ತು. ಇದೀಗ ತರಾತುರಿಯಲ್ಲಿ ಕಾಮಗಾರಿ ಮುಗಿಸಿರುವ ಪರಿಣಾಮದಿಂದ ಸೇತುವೆ ಕೆಳಗಿನ ಭಾಗ ನರಕಸದೃಶವಾಗಿದೆ ಎನ್ನುತ್ತಾರೆ ಸ್ಥಳೀಯರು. ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಆತುರಾತುರವಾಗಿ ಡಾಮರು ಹಾಕಿದ ಪರಿಣಾಮ ಈ ಮಳೆಗಾಲದಲ್ಲಿ ಎಲ್ಲಾ ಕಿತ್ತುಹೋಗುತ್ತಿದೆ.
ಮೇಲ್ಸೇತುವೆಗೆ ಪಿಲ್ಲರ್ ನಿರ್ಮಾಣ ಸಂದರ್ಭ ತೆಗೆಯಲಾದ ಮಣ್ಣನ್ನು ಅಲ್ಲಲ್ಲೇ ಬಿಡಲಾಗಿದೆ. ರಸ್ತೆ ಬದಿ ಚರಂಡಿ ಕೂಡ ಮಾಡಿಲ್ಲ. ಹಾಗಾಗಿ ಮಳೆ ಬಂದಾಗ ನೀರೆಲ್ಲಾ ರಸ್ತೆ ಮೇಲೆ ಹರಿದು ಕೆಸರು ಗದ್ದೆಯಂತಾಗುತ್ತದೆ. ವಾಹನ ಓಡಿಸುವುದಿರಲಿ, ನಡೆದಾಡಲು ಕೂಡ ಸಾಧ್ಯವಾಗದ ಸ್ಥಿತಿ ಇಲ್ಲಿ ನಿರ್ಮಾಣ ಆಗುತ್ತಿದೆ. ಸರಿಯಾದ ಮಾರ್ಗಸೂಚಿ ಫಲಕಗಳನ್ನು ಅಳವಡಿಸದಿರುವುದರಿಂದಲೂ ಇಲ್ಲಿಗೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗಗರಿಗೆ ತೊಂದರೆ ಆಗುತ್ತಿದೆ ಎನ್ನುವುದು ಸ್ಥಳೀಯರ ದೂರು.
2ಕೋಟಿ ನೀರಿಗೆ ಹೋಮ
ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಈ ವರ್ಷ ಮಳೆಗಾಲಕ್ಕೂ ಮೊದಲು ಉದ್ಯಾನ ನಿರ್ಮಿಸಲಾಗಿದೆ. ಇದಕ್ಕೆ 2 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಮಳೆಗಾಲದಲ್ಲಿ ಈ 2 ಕೋಟಿ ರೂ. ಅಕ್ಷರಶಃ ನೀರಿಗೆ ಹೋಮ ಮಾಡಿದಂತೆ ಆಗಿದೆ. ಬೆಲೆಬಾಳುವ ಎಲೆಕ್ಟಾçನಿಕ್ ಉಪಕರಣಗಳು, ವಿದ್ಯುತ್ ದೀಪಗಳು ಹಾಳಾಗಿವೆ. ಬೇಲಿಗಳು ಕಳಚಿ ಬಿದ್ದಿದೆ. ನದಿ ಬದಿಯಲ್ಲಿ ನಿರ್ಮಿಸಿದ್ದ ಅಟ್ಟಣಿಗೆ ನದಿ ಪಾಲಾಗಿದೆ. ಗಿಡಗಳು ಕೊಳೆತು ಹೋಗಿವೆ.
ಭಾಗಮಂಡಲಕ್ಕೆ ಫ್ಲೆöÊ ಓವರ್ ಬಂದಿರುವುದರಿAದ ದೊಡ್ಡದೊಂದು ಸಮಸ್ಯೆ ದೂರವಾಗಿದೆ. ಮೇಲ್ಸೇತುವೆಗೆ ಮೊದಲು ವಿರೋಧ ವ್ಯಕ್ತಪಡಿಸಿದವರಿಗೂ ಈಗ ಇದರ ಉಪಯೋಗದ ಅರಿವಾಗಿದೆ. ಮೊದಲೆಲ್ಲಾ ಸಾಮಾನ್ಯವಾಗಿ ವರ್ಷದಲ್ಲಿ 3-4 ಬಾರಿ ಭಾಗಮಂಡಲ ದ್ವೀಪ ಆಗುತ್ತಿತ್ತು. ಈ ವರ್ಷ ಆ ಸಮಸ್ಯೆ ಎದುರಾಗಿಲ್ಲ. ಆದರೆ ಸೇತುವೆಯ ಕೆಳಗಿನ ರಸ್ತೆಯಲ್ಲಿ ತಿರುಗಾಡಲು ಕೂಡ ಸಾಧ್ಯವಿಲ್ಲದ ಸ್ಥಿತಿ ಇದೆ.
ಶಬರೀಶ್ ಕುದುಕುಳಿ, ಭಾಗಮಂಡಲ ನಿವಾಸಿ
ಮೇಲ್ಸೇತುವೆಯ ಸಂಪರ್ಕ ರಸ್ತೆಗಳ ಕೆಲಸ ಸರಿಯಾಗಿ ಆಗಿಲ್ಲ. ತರಾತುರಿಯಲ್ಲಿ ಡಾಮರೀಕರಣ ಮಾಡಿರುವುದರಿಂದ ಎಲ್ಲವೂ ಕಿತ್ತುಬಂದು ಹಳ್ಳವಾಗಿದೆ. ಎಲ್ಲವೂ ಚರಂಡಿ ವ್ಯವಸ್ಥೆ ಸರಿ ಇಲ್ಲ. ಪಿಲ್ಲರ್ ನಿರ್ಮಾಣದ ಸಂದರ್ಭ ತೆಗೆದಿರುವ ಮಣ್ಣಿನ ರಾಶಿ ಹಾಗೆಯೇ ಉಳಿದಿದ್ದು, ಮಳೆ ಬಂದಾಗ ರಸ್ತೆ ಮೇಲೆಲ್ಲಾ ನೀರು ಹರಿದು ಕೆಸರಲಿನ ಗದ್ದೆಯಂತೆ ಆಗುತ್ತದೆ. ಇನ್ನು 2-3 ದಿವಸಗಳಲ್ಲಿ ಉದ್ಯಾನದ ಕತೆ ಗೊತ್ತಾಗಲಿದೆ.
ಶ್ರೀನಾಥ್ ನಾಯಕ್, ಭಾಗಮಂಡಲ ನಿವಾಸಿ
ನೆನೆಗುದಿಗೆ ಬಿದ್ದಿದ್ದ ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯನ್ನು ಈ ಮಳೆಗಾಲಕ್ಕೆ ಮುಗಿಸಿಕೊಡಲಾಗಿದೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ಅನುಕೂಲ ಆಗಿದೆ. ಮುಂದೆ ಒಳ್ಳೆಯ ದಿನ ನೋಡಿಕೊಂಡು ಈ ಮೇಲ್ಸೇತುವೆಗೆ ಅಧಿಕೃತ ಚಾಲನೆ ನೀಡಲಾಗುವುದು. ಈ ಸಂದರ್ಭದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ