

ತುಮಕೂರು: ನಗರದಲ್ಲಿ ಭಾನುವಾರವೂ ಮಳೆ ಸುರಿಯಿತು. ಸಂಜೆ 4ಕ್ಕೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಬಿಟ್ಟುಬಿಟ್ಟು ಸುರಿಯಿತು. ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು.
ಶೆಟ್ಟಿಹಳ್ಳಿ ರಸ್ತೆ ರೈಲ್ವೆ ಅಂಡರ್‌ಪಾಸ್, ಕುಣಿಗಲ್ ರಸ್ತೆ ಅಂಡರ್ ಪಾಸ್‌ಗಳಲ್ಲಿ ಆಳುದ್ದ ನೀರು ನಿಂತು ಕೆಲಕಾಲ ವಾಹನ ಸವಾರರು ಸಂಚರಿಸಲು ಪರದಾಡಿದರು. ಜಿಲ್ಲೆಯ ಬಹುತೇಕ ಭಾಗದಲ್ಲಿ ಕಳೆದ ಮೂರು, ನಾಲ್ಕು ದಿನದಿಂದ ಮಳೆ ಸುರಿಯುತ್ತಿದ್ದು, ರೈತರು ಖುಷಿಯಾಗಿದ್ದಾರೆ.
ಗುಡುಗಿದರೆ ಕರೆಂಟ್ ಕಟ್: ಗ್ರಾಮೀಣ ಭಾಗದಲ್ಲಿ ಮಿಂಚು, ಗುಡುಗು ಕಾಣಿಸಿದರೆ ಸಾಕು ಬೆಸ್ಕಾಂ ರಾತ್ರಿ ಪೂರ್ತಿ ವಿದ್ಯುತ್ ಕಡಿತ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದು, ಜನರು ಹಿಡಿಶಾಪ ಹಾಕುವಂತಾಗಿದೆ. ರಾತ್ರಿ ಸೆಕೆ ಹಾಗೂ ಸೊಳ್ಳೆ ಕಾಟಕ್ಕೆ ಹೈರಾಣಾಗಿರುವ ಜನರು ಬೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಜಿಲ್ಲೆಯ ಬಹುತೇಕ ಭಾಗದಲ್ಲಿ ಈ ಸಮಸ್ಯೆಯಿದ್ದು ಸಿಬ್ಬಂದಿ ಶ್ರಮವಹಿಸಬೇಕಿದೆ.
ನೆಲಕಚ್ಚಿದ ಸಾವಿರಾರು ಪರಂಗಿ ಗಿಡ : ಪಾವಗಡ ಪಟ್ಟಣದಲ್ಲಿ ಭಾನುವಾರ ಸುರಿದ ಗುಡುಗು ಸಹಿತ ಆಲಿಕಲ್ಲು ಮಳೆ ಅವಾಂತರ ಸೃಷ್ಟಿಸಿದೆ. ಒಂದೆಡೆ ಮರ ಬಿದ್ದು ಕಾರು, ಬೈಕ್ ಜಖಂಗೊಂಡಿದ್ದರೆ, ಮತ್ತೊಂದೆಡೆ ಸಾವಿರ ಪಪ್ಪಾಯ ಗಿಡಗಳು ನೆಲಕಚ್ಚಿವೆ. ಬಳ್ಳಾರಿ ರಸ್ತೆಯ ನ್ಯಾಯಾಲಯದ ಮುಂಭಾಗ ಇರುವ ಬಂಡೆ ವ್ಯಾಪಾರಿ ರಮೇಶ್ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಸಂಜೆ ಸುರಿದ ಭಾರಿ ಮಳೆಗೆ ಮರ ಬೇರು ಸಮೇತ ಬಿದ್ದು ಜಖಂಗೊಂಡಿವೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲಿಸಿದ್ದು, ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪಟ್ಟಣದ ಬಳ್ಳಾರಿ ರಸ್ತೆಯ ವಾರ್ಗದಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೆ ಕಿರಿಕಿರಿಯುಂಟಾಯಿತು. ಇತ್ತೀಚೆಗಷ್ಟೆ ಕೆಶಿಪ್‌ನಿಂದ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ್ದು, ನೀರು ಹರಿಯದೆ ರಸ್ತೆಯಲ್ಲಿ ಮೊಣಕಾಲುದ್ದ ನಿಂತಿದ್ದರಿಂದ ವಾಹನ ಸವಾರರು ಹಿಡಿಶಾಪ ಹಾಕಿದರು.
ಪರಿಹಾರಕ್ಕೆ ರೈತನ ಒತ್ತಾಯ: ಪಟ್ಟಣದ ಸಮೀಪ ರೈತ ಹರೀಶ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಸಾವಿರ ಪರಂಗಿ ಗಿಡಗಳು ನೆಲಕಚ್ಚಿದ್ದು, ನಷ್ಟವುಂಟಾಗಿದೆ. ಬ್ಯಾಂಕಿನಲ್ಲಿ ಸಾಲ ವಾಡಿ ಬೆಳೆ ಬೆಳೆಸಿದ್ದು, ಸಲು ಕಟಾವು ಮಾಡಬೇಕು ಎನ್ನುವಾಗ ಹಾನಿಯಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಹರೀಶ್ ಮನವಿ ಮಾಡಿದ್ದಾರೆ.