

ಬೆಂಗಳೂರು: ಮಹಾನಗರದಲ್ಲಿ ವಾರದ ಬಳಿಕ ಮಂಗಳವಾರ ಸುರಿದ ಭಾರಿ ಮಳೆಯಿಂದ ತಂಪಿನ ವಾತಾವರಣ ಮೂಡಿದರೂ, ಹಲವು ಸಂಖ್ಯೆಯ ಮರ-ಟೊಂಗೆಗಳು ಧರೆಗುರುಳಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ.
ಸಂಜೆ ಹಾಗೂ ರಾತ್ರಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ನಗರದ ಎಲ್ಲ ಭಾಗಗಳಲ್ಲಿ ವರ್ಷಧಾರೆ ಸುರಿದಿದ್ದು, ರಸ್ತೆಗಳಲ್ಲಿ ರಭಸವಾಗಿ ನೀರು ಹರಿದಿದೆ. ಇನ್ನೂ ಕೆಲವೆಡೆ ತಗ್ಗುಪ್ರದೇಶಗಳಲ್ಲಿ ರಾತ್ರಿ ಸುರಿದ ವರ್ಷಧಾರೆಯಿಂದ ಹೆಚ್ಚಿನ ನೀರು ಸಂಗ್ರಹಗೊಂಡಿತು. ಇದರಿಂದ ಆತಂಕಕ್ಕೆ ಒಳಗಾದ ಸ್ಥಳೀಯರು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ನೆರವು ಯಾಚಿಸಿದರು.
ತಗ್ಗುಪ್ರದೇಶಗಳಲ್ಲಿನ ಮನೆಗಳ ಬಳಿ ರಾತ್ರಿಯೇ ನೀರನ್ನು ಹೊರಹಾಕಲಾಯಿತು. ಆದರೂ, ಕೆಲ ಜಂಕ್ಷನ್‌ಗಳಲ್ಲಿ ನೀರು ನಿಂತಿತ್ತು. ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳ ಬಳಿ ಮಳೆನೀರು ಸಂಗಹ್ರಹವಾಗಿದ್ದಕ್ಕೆ ವಾಹನಗಳು ನಿಧಾನವಾಗಿ ಸಂಚರಿಸಿದವು. ಸಂಜೆ ಕಚೇರಿ ಬಿಟ್ಟ ವೇಳೆ ಮನೆಗೆ ತೆರಳುತ್ತಿದ್ದ ದ್ವಿಚಕ್ರವಾಹನ ಸವಾರರು ಪರದಾಡಿದರು.
ಉತ್ತರ, ಪೂರ್ವ ಭಾಗದಲ್ಲಿ ಹೆಚ್ಚು ಮಳೆ:
ನಗರದ ಉತ್ತರ ಹಾಗೂ ಪೂರ್ವ ಭಾಗದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಮಾರತ್‌ಹಳ್ಳಿ, ಎಚ್‌ಎಎಲ್, ಬಾಣಸವಾಡಿ, ಜಕ್ಕೂರು, ಕೊಡಿಗೇಹಳ್ಳಿ ಜೋರು ಮಳೆಯಾಗಿದೆ. ರಾತ್ರಿ ದಕ್ಷಿಣ ಭಾಗದ ಹಲವು ಕಡೆಗಳಲ್ಲಿ ಬಿರುಸಿನ ವರ್ಷಧಾರೆಯಾಯಿತು. ಈ ವೇಳೆ ಪಾಲಿಕೆಯ ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ಹಲವು ಮರ ಹಾಗೂ ಟೊಂಗೆಗಳು ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಟೊಂಗೆಗಳನ್ನು ತೆರವುಗೊಳಿಸಿದ್ದರೆ, ದೊಡ್ಡ ಮರಗಳನ್ನು ರಸ್ತೆಬದಿಗೆ ಸರಿಸಲಾಗಿದೆ. ಬುಧವಾರ ಬೆಳಗ್ಗೆ ವೇಳೆ ಧರೆಗುರುಳಿದ ಮರಗಳ ಅವಶೇಷವನ್ನು ತೆರವುಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟೆಚ್ಚರ ವಹಿಸಲು ಆಯುಕ್ತರ ಸೂಚನೆ:
ಮಳೆ ಅನಾಹತ ಸಂಬಂಧ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿ ಹಾಗೂ ಇತರ ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕು. ಅನಾಹತ ಸಂಭವಿಸುವ ಸ್ಥಳಗಳಿಗೆ ತ್ವರಿವಾಗಿ ತೆರಳಿ ಅಲ್ಲಿನ ಜನರಿಗೆ ನೆರವು ನೀಡಬೇಕು. ಹೆಚ್ಚು ಅನಾಹತ ಆಗಿದ್ದಲ್ಲಿ ಮೇಲಾಧಿಕಾರಿಗಳ ಆದೇಶಕ್ಕೆ ಕಾಯದೆ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಎಲ್ಲ ವಲಯಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಲ್ಲೆಲ್ಲಿ ಹೆಚ್ಚು ಮಳೆ? (ಮಿ.ಮೀ.ಗಳಲ್ಲಿ):
ಎಚ್‌ಎಎಲ್ ವಿಮಾನನಿಲ್ದಾಣ 40
ಬಾಣಸವಾಡಿ 37
ಮಾರತ್‌ಹಳ್ಳಿ 25
ಸೀಗೇಹಳ್ಳಿ 25
ಸಿಂಗನಾಯಕನಹಳ್ಳಿ 23
ಕಾಟನ್‌ಪೇಟೆ 23
ಕೊಡಿಗೇಹಳ್ಳಿ 21
ಜಕ್ಕೂರು 20
ಸಂಪಂಗಿರಾಮನಗರ 18
ವಿ.ವಿ.ಪುರ 18
30 ಮರಗಳು ಧರೆಗೆ:
ವಲಯ ಮರ ಟೊಂಗೆ
ಪೂರ್ವ 4 33
ಪಶ್ಚಿಮ 4 5
ದಕ್ಷಿಣ 7 16
ಯಲಹಂಕ 2 8
ಮಹದೇವಪುರ 4 8
ಬೊಮ್ಮನಹಳ್ಳಿ 7 18
ಆರ್‌ಆರ್‌ನಗರ 2 12
ದಾಸರಹಳ್ಳಿ - -