ಕರಾವಳಿಯಲ್ಲಿ ಭಾರೀ ಮಳೆ ಮುಂದುವರಿಕೆ; ಭೂ ಕುಸಿತಕ್ಕೆ ಓರ್ವ ಮಹಿಳೆ ಸಾವು

dakshina kannada
Published on

ದಕ್ಷಿಣ ಕನ್ನಡ: ರಾಜ್ಯದ ದಕ್ಷಿಣ ಕನ್ನಡದ ಕರಾವಳಿ ಜಿಲ್ಲೆಯಲ್ಲಿ ಶುಕ್ರವಾರವೂ ಭಾರೀ ಮಳೆ ಮುಂದುವರೆದಿದ್ದು, ನಗರ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ನಿರಂತರ ಮಳೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಶುಕ್ರವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ಭಾರೀ ಮಳೆಗೆ ಗುಡ್ಡವೊಂದು ಮನೆಯ ಮೇಲೆ ಕುಸಿದ ಪರಿಣಾಮ 47 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ಮಹಿಳೆಯನ್ನು ಮಹಮ್ಮದ್ ಅವರ ಪತ್ನಿ ಜರೀನಾ ಎಂದು ಗುರುತಿಸಲಾಗಿದೆ.

ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು, ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅವರೊಂದಿಗೆ ತಾಲೂಕು ಆಡಳಿತದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಮಳೆಯಿಂದ ಹಾನಿಗೊಳಗಾದ 53 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಪಾಣಾಜೆ ರಸ್ತೆಯಲ್ಲಿ ಗುರುವಾರ ಚೆಲ್ಯಡ್ಕದಲ್ಲಿ ತಗ್ಗು ಸೇತುವೆಯೊಂದು ಸಂಪೂರ್ಣ ಮುಳುಗಡೆಯಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ತುಂಬಿದ್ದು, ದೇವಸ್ಥಾನದ ಪಕ್ಕದ ಸ್ನಾನಘಟ್ಟ ಬಹುತೇಕ ಮುಳುಗಡೆಯಾಗಿದೆ ಎಂದು ವರದಿ ಹೇಳಿದೆ.

ಸದ್ಯ ವರದಿ ಅನುಸಾರ, ಹವಾಮಾನ ಇಲಾಖೆಯು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಶುಕ್ರವಾರ ರೆಡ್ ಅಲರ್ಟ್ ಮತ್ತು ಶನಿವಾರ ಆರೆಂಜ್ ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿಲ್ಲಾಡಳಿತಗಳು ಶುಕ್ರವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net