

ಮಂಗಳೂರು: ಕಳೆದ ಹಲವು ದಿನಗಳಿಂದ ಕರಾವಳಿಯಾಧ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಶುಕ್ರವಾರವೂ ಅಲ್ಲಲ್ಲಿ ಸಾದಾರಣ ಮಳೆಯಾಗಿದೆ. ಸಂಜೆ ವೇಳೆ ಬೆಳ್ತಂಗಡಿ, ಸುಳ್ಯ, ಪುತ್ತೂರು ಬಾಗದಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗಿತ್ತು.
ದಿನದ ಬಹುತೇಕ ಸಮಯ ಮಳೆ, ಮೋದಮುಸುಕಿದ ವಾತಾವರಣ ಕಂಡುವಬಂದಿದೆ. ಮಂಗಳೂರು, ಸುಳ್ಯ, ಬಂಟ್ವಾಳ, ಪುತ್ತೂರು ಸುತ್ತಮುತ್ತ ಮಧ್ಯಾಹ್ನ ಹಾಗೂ ಸಂಜೆ ವೇಳೆ ಅಲ್ಪ ಮಳೆಯಾಗಿದೆ. ಸಧ್ಯದ ಮುನ್ಸೂಚನೆಯಂತೆ ಮುಂದಿನ 2 ದಿನ ಕರಾವಳಿಯಾಧ್ಯಂತ ಮಳೆ ಕ್ಷೀಣಗೊಳ್ಳಲಿದೆ. ಈಗಿನಂತೆ ಜೂನ್ 30ರಿಂದ ಜು.2ರ ತನಕ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 35ಕಿ.ಮೀ ನಿಂದ 40ಕಿ.ಮೀ ವರೆಗೆ ಹೆಚ್ಚಳವಾಗಿರುವುದರಿಂದ ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಶುಕ್ರವಾರ ಗರಿಷ್ಠ 35.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಶುಕ್ರವಾರ ಬೆಳಗ್ಗಿನವರೆಗೆ 12.1 ಮಿಲಿ ಮೀಟರ್ ಮಳೆ ದಾಖಲಾಗಿದೆ. ಮೂಡುಬಿದಿರೆಯಲ್ಲಿ 12.1 ಮಿ.ಮೀ, ಬೆಳ್ತಂಗಡಿಯಲ್ಲಿ 18.2 ಮಿ.ಮೀ, ಬಂಟ್ವಾಳ 11.5 ಮಿ.ಮೀ, ಮಂಗಳೂರು 12.1 ಮಿ.ಮೀ, ಪುತ್ತೂರು 12.8 ಮಿ.ಮೀ, ಸುಳ್ಯ 13.3 ಮಿ.ಮೀ, ಕಡಬ 13.1 ಮಿ.ಮೀ, ಮೂಲ್ಕಿ 10.5 ಮಿ.ಮೀ, ಉಳ್ಳಾಲ 11.7 ಮಿ.ಮೀ. ಮಳೆಯಾಗಿದೆ.