

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ವತಿಯಿಂದ ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ನಗರದ ಕೊಪ್ಪದಕೇರಿಯ ಯೋಗಮಯಂ ಯೋಗ ಕೇಂದ್ರದಲ್ಲಿ ಹೃದಯ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷೆ ಗೌರಿ ಮದಲಭಾವಿ ಮಾತನಾಡಿ, ಹೃದಯ ಹಾಗೂ ರಕ್ತನಾಳದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಹೆಚ್ಚುತ್ತಿರುವ ಹೃದಯಾಘಾತ, ಹೃದ್ರೋಗ ಸಮಸ್ಯೆ ಬಗ್ಗೆ ಅರಿವು ಮೂಡಿಸಲು ಮತ್ತು ಸಮುದಾಯಕ್ಕೆ ಅಗತ್ಯ ಆರೋಗ್ಯ ಸೇವೆ ಒದಗಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನಾರಾಯಣ ಹೃದಯಾಲಯದ ದುಂಡೇಶ ತಡಕೋಡ ಮಾತನಾಡಿ, ಶಿಬಿರದಲ್ಲಿ 149 ಮಹಿಳೆಯರು ಮತ್ತು 47 ಪುರುಷರ ಆರೋಗ್ಯ ತಪಾಸಣೆ ಮಾಡಲಾಯಿತು. ರಕ್ತದೊತ್ತಡದ ಮೇಲ್ವಿಚಾರಣೆ, ರಕ್ತದಲ್ಲಿ ಸಕ್ಕರೆ ತಪಾಸಣೆ, ಇಸಿಜಿ, ಇಕೋ ತಪಾಸಣೆ ಮತ್ತು ಅನುಭವಿ ಹೃದ್ರೋಗ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದರು.
ಯೋಗಮಯ0 ಯೋಗ ಕೇಂದ್ರ, ಇನ್ನರ್ವೀಲ್, ಸುವರ್ಣ ಮಹಿಳೆಯರ ಕನಸಿನ ಧಾರವಾಡ, ಶ್ರೀಯಾ ನರ್ಸಿಂಗ್ ಕಾಲೇಜು ಹಾಗೂ ಜೆಎಸ್ಎಸ್ ವಾಕ್ ಹಾಗೂ ಶ್ರವಣ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು.
ಯೋಗ ಗುರುಗಳಾದ ಲಕ್ಷ್ಮಣ ಬೋಡ್ಕೆ, ರೋಟರಿ ಕಾರ್ಯದರ್ಶಿ ಸ್ಮಿತಾ ಮಂತ್ರಿ, ಶಶಿಕಲಾ ಹೆಬ್ಳೀಕರ, ಹೇಮಾಕಿರೇಸೂರ, ಇನ್ನರ್ವೀಲ್ನ ಶೋಭಾ ಹಿರೇಗೌಡರ, ಇತರರಿದ್ದರು.