ಮದ್ವೆ ದಿನವೇ ಹೃದಯಾಘಾತಕ್ಕೆ ವಧು ಸಾವು: ನಿಲ್ಲದ ವಿವಾಹ, ಮೃತಳ ತಂಗಿಗೆ ತಾಳಿ ಕಟ್ಟಿದ ವರ!

Photo of Gujrat Bride
Published on

ಸೂರತ್​: ಮದುವೆಯ ದಿನವೇ ಹೃದಯಾಘಾತಕ್ಕೀಡಾಗಿ ವಧು ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಗುಜರಾತಿನ ಭಾವನಗರದ ಮಹಾದೇವ ದೇವಸ್ಥಾನದಲ್ಲಿ ನಡೆದಿದೆ.

ಮೃತಳನ್ನು ಹೇತಾಲ್​ ಎಂದು ಗುರುತಿಸಲಾಗಿದೆ. ಸುಭಾಶ್​ನಗರದ ಹೀತಲ್​ ಮತ್ತು ನಾರಿ ಗ್ರಾಮದ ವಿಶಾಲ್​ ಮದುವೆ ನಿನ್ನೆ (ಫೆ.24) ನಡೆಯುತ್ತಿತ್ತು. ಸಾಕಷ್ಟು ಅತಿಥಿಗಳು ಮದುವೆಗೆ ಆಗಮಿಸಿದ್ದರು ಮತ್ತು ದೇವಸ್ಥಾನದ ಆವರಣ ಅತಿಥಿಗಳಿಂದ ತುಂಬಿ ತುಳುಕುತ್ತಿತ್ತು. ಹಿನ್ನೆಲೆ ಸಂಗೀತದೊಂದಿಗೆ ಮದುವೆಯ ಆಚರಣೆ ಅದ್ಧುರಿಯಾಗಿ ಸಾಗಿತ್ತು. ಮದುವೆ ಪೂಜಾ ವಿಧಾನಗಳು ಶುರುವಾದಾಗ, ಹೇತಾಲ್​ಗೆ ತಲೆ ಸುತ್ತು ಬಂದು ಮೂರ್ಛೆ ಹೋದಳು. ಆಕೆಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಆಕೆ ಹೃದಯಾಘಾತದಿಂದ ಮೃತಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ಹೇತಾಲ್‌ನ ಸಾವಿನಿಂದ ಇಡೀ ಕುಟುಂಬ ಶೋಕದಲ್ಲಿದ್ದರೂ, ಮದುವೆಯ ಆಚರಣೆಯನ್ನು ಮುಂದುವರೆಸಲು ಸಂಬಂಧಿಕರು ಪರ್ಯಾಯ ಯೋಜನೆಯನ್ನು ಪ್ರಸ್ತಾಪಿಸಿದರು. ವಧುವಿನ ತಂಗಿಯನ್ನು ವಿಶಾಲ್ ಕೊಟ್ಟು ಮದುವೆ ಮಾಡಲು ಸೂಚಿಸಿದರು. ಹೇತಲ್​ ಶವವನ್ನು ಕೋಲ್ಡ್​ ಸ್ಟೋರೆಜ್​ನಲ್ಲಿ ಇರಿಸಿ ನೋವಿನಿಂದಲೇ ಮದುವೆ ಕಾರ್ಯವನ್ನು ಮುಗಿಸಿದರು.

ಘಟನೆಯ ಬಗ್ಗೆ ಭಾವನಗರದ ಕಾರ್ಪೊರೇಟರ್ ಮತ್ತು ಮಾಲ್ಧಾರಿ ಸಮಾಜದ ಮುಖಂಡ ಲಕ್ಷ್ಮಣಭಾಯ್ ರಾಥೋಡ್ ಮಾತನಾಡಿ, ಇದು ಅತ್ಯಂತ ದುಃಖಕರ ಸಂಗತಿ ಎಂದರು. ಮಗಳ ಸಾವಿನಿಂದ ಕುಟುಂಬವು ಆಘಾತಕ್ಕೊಳಗಾಗಿದ್ದರೂ, ಕುಟುಂಬಸ್ಥರು ವರ ಮತ್ತು ಅವರ ಕುಟುಂಬವನ್ನು ಬರಿಗೈಯಲ್ಲಿ ಕಳುಹಿಸದೆ ಮಾದರಿಯಾದರು ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net