

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಸ್ವಚ್ಛತೆ ಬಗ್ಗೆ ಗ್ರಾಪಂ ಹಾಗೂ ಸ್ಥಳೀಯ ಕೆಲವೊಂದು ಸ್ವಚ್ಛತಾ ತಂಡಗಳು ಅಲ್ಲಲ್ಲಿ ಸೂಚನಾ ಫಲಕ ಹಾಗೂ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡರೂ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ.
ಬೆಳ್ಮಣ್ನಿಂದ ಮುದರಂಗಡಿ ಗ್ರಾಪಂ ಸಂಪರ್ಕಿಸುವ ಗಡಿಭಾಗದ ಬಾಳೆಗುಂಡಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ತ್ಯಾಜ್ಯ ರಸ್ತೆ ಬದಿಯಲ್ಲಿ ಎಸೆಯುವುದರಿಂದ ಪರಿಸರವಿಡೀ ಪ್ಲಾಸ್ಟಿಕ್ ತ್ಯಾಜ್ಯಗಳು ರಾರಾಜಿಸುತ್ತಿದೆ. ಒಣಕಸದ ಜತೆಯಲ್ಲಿ ಹಸಿ ಕಸವನ್ನು ಕೋಳಿ ತ್ಯಾಜ್ಯ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಎಸೆಯುವ ಪರಿಣಾಮ ಈ ಭಾಗದಲ್ಲಿ ಸಂಚರಿಸುವರು ಮೂಗುಮುಚ್ಚಿ ಸಾಗುವುದು ಅನಿವಾರ್ಯ. ಗ್ರಾಪಂನ ಕಸಸಂಗ್ರಹ ವಾಹನ ಇದೇ ರಸ್ತೆಯಲ್ಲಿ ಓಡಾಡಿದರೂ ತ್ಯಾಜ್ಯ ತೆರವುಗೊಳಿಸುತ್ತಿಲ್ಲ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಎರಡು ಗ್ರಾಪಂ ವ್ಯಾಪ್ತಿಯ ಗಡಿ ಭಾಗದ ನಿರ್ಜನ ಪ್ರದೇಶವಾಗಿದ್ದು, ಇಲ್ಲಿನ ಎರಡೂ ಗ್ರಾಮದ ಕೆಲ ಕಿಡಿಗೇಡಿಗಳು ರಸ್ತೆ ಇಕ್ಕೆಲದಲ್ಲಿ ತ್ಯಾಜ್ಯ ಎಸೆದುಹೋಗುತ್ತಾರೆ.
ಬೆಳ್ಮಣ್ನ ನೀರ್ಚಾಲು ಭಾಗದಿಂದ ಸಂಪರ್ಕ ಪಡೆಯುವ ಬಾಳೆಗುಂಡಿ ಮುದರಂಗಡಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಾಡುಗಳಿಂದ ಆವೃತ್ತಗೊಂಡಿದ್ದು, ಇಲ್ಲಿ ಹೇರಳ ಪ್ರಮಾಣದಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತ್ಯಾಜ್ಯ ಎಸೆದಿದ್ದು, ಗಾಳಿ ರಭಸಕ್ಕೆ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರವಿಡೀ ಹಬ್ಬಿದ್ದು, ಕಾಡು ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಹರಡಿಕೊಂಡಿದೆ. ಹೀಗಾಗಿ ಕಾಡು ಪ್ರಾಣಿಗಳು ಕೂಡ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸುವಂತಾಗಿದೆ. ಕೂಡಲೇ ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಲವು ಸಮಯದಿಂದಲೂ ಈ ಭಾಗದಲ್ಲಿ ತ್ಯಾಜ್ಯ ಎಸೆದು ಹೋಗುತ್ತಿರುವ ಕಿಡಿಗೇಡಿಗಳ ಬಗ್ಗೆ ಸೂಕ್ತ ಕ್ರಮ ಸ್ಥಳೀಯ ಪಂಚಾಯಿತಿ ಕೈಗೊಳ್ಳಬೇಕಾಗಿದೆ. ಇಲ್ಲದೆ ಹೇರಳವಾಗಿ ತ್ಯಾಜ್ಯ ಎಸೆಯಲಾಗುವ ಈ ನಿರ್ಜನ ಪ್ರದೇಶದಲ್ಲಿ ಸಿಸಿ ಕ್ಯಾಮರಾವನ್ನಾದರೂ ಅಳವಡಿಸಿ ಶುಚಿತ್ವ ಕಾಪಾಡುವಲ್ಲಿ ಪಂಚಾಯಿತಿ ಆಡಳಿತ ಮುಂದಾಗಬೇಕಾಗಿದೆ. ಹಲವು ಬಾರಿ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಪಂಚಾಯಿತಿ ಸ್ವಚ್ಛತಾ ತಂಡ ತೆರವುಗೊಳಿಸಿದರೂ ತ್ಯಾಜ್ಯದ ರಾಶಿ ತಂದು ಸುರಿಯಲಾಗುತ್ತಿದೆ. ಹೀಗಾಗಿ ರಸ್ತೆ ಬದಿ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಬೆಳ್ಮಣ್ನಿಂದ ಮುದರಂಗಡಿ ಸಾಗುವ ದಾರಿ ಬದಿಯಲ್ಲಿ ಅಲ್ಲಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು ಪರಿಸರ ಗಬ್ಬೆದ್ದು ನಾರುವ ಸ್ಥಿತಿ ನಿರ್ಮಾಣಗೊಂಡಿದೆ. ಪ್ಲಾಸ್ಟಿಕ್ ಸಹಿತ ಇತರ ತ್ಯಾಜ್ಯ ಇಲ್ಲೇ ತಂದು ಸುರಿಯಲಾಗುತ್ತಿದೆ. -ಮಹೇಶ್ ಶೆಟ್ಟಿ ವಾಹನ ಸವಾರ ರಸ್ತೆಯ ಇಕ್ಕೆಲದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮಾತ್ರವಲ್ಲದೆ ಕೋಳಿ ತ್ಯಾಜ್ಯ ತಂದು ಸುರಿಯಲಾಗುತ್ತದೆ. ಗಾಳಿ ರಭಸಕ್ಕೆ ಪರಿಸರವಿಡೀ ತ್ಯಾಜ್ಯದ ರಾಶಿ ಹರಡಿಕೊಂಡಿದೆ. ಕೂಡಲೇ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಾಗಿದೆ. -ರೂಪೇಶ್ ಗ್ರಾಮಸ್ಥ ಹಲವು ಸಮಯದಿಂದ ಈ ಭಾಗದ ಕಾಡು ಪ್ರದೇಶದಲ್ಲಿರುವ ದಾರಿ ಬದಿಯಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ಗ್ರಾಪಂ ಯಾವುದೇ ಕ್ರಮಕೈಗೊಂಡತ್ತಿಲ್ಲ. ಹೇರಳ ಪ್ರಮಾಣದಲ್ಲಿ ತ್ಯಾಜ್ಯ ಎಸೆಯಲಾಗುವ ಜಾಗಕ್ಕೆ ಸಿಸಿ ಕ್ಯಾಮರಾ ಅಳವಡಿಸುವಲ್ಲಿ ಸ್ಥಳಿಯಾಡಳಿತ ಮನಸು ಮಾಡಬೇಕಾಗಿದೆ. -ಮಧು ಸ್ಥಳೀಯ ನಿವಾಸಿ https://www.vijayavani.net/cultural-splendor-at-rd-charmakki-school https://www.vijayavani.net/amarashilpi-jakanachari-jayanti-celebration