

Lung Cancer: ಒಮ್ಮೆ ಶ್ವಾಸಕೋಶದ ಕ್ಯಾನ್ಸರ್ ಎಂದರೆ ಕೇವಲ ವಯಸ್ಸಾದ ಧೂಮಪಾನಿಗಳಿಗೆ ಮಾತ್ರ ಬರುವ ರೋಗ ಎಂಬ ಭಾವನೆಯಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಎಂದಿಗೂ ಸಿಗರೇಟ್ ಮುಟ್ಟದವರು ಹಾಗೂ ಮಹಿಳೆಯರಲ್ಲೂ ಈ ಕಾಯಿಲೆ ಆತಂಕಕಾರಿ ರೀತಿಯಲ್ಲಿ ಏರಿಕೆಯಾಗುತ್ತಿದೆ. ಆಸ್ತಮಾ ಅಥವಾ ಸಾಮಾನ್ಯ ಕೆಮ್ಮಿನಂತೆ ಕಾಣಿಸಿಕೊಳ್ಳುವ ಇದರ ಲಕ್ಷಣಗಳು ದೀರ್ಘಕಾಲ ಮುಂದುವರಿದಾಗ ನಿರ್ಲಕ್ಷಿಸದೇ ತಕ್ಷಣ ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
ವೈದ್ಯರು ಸೂಚಿಸುವ ಪ್ರಕಾರ, ಧೂಮಪಾನ ಮಾಡದವರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಲು ವಾಯು ಮಾಲಿನ್ಯ, ಅಡುಗೆ ಹೊಗೆ, ಪರೋಕ್ಷ ಧೂಮಪಾನ (Passive Smoking), ಕೆಲಸದ ಸ್ಥಳಗಳಲ್ಲಿ ಅಪಾಯಕಾರಿ ರಾಸಾಯನಿಕ ಹಾಗೂ ರೇಡಾನ್ ಅನಿಲಕ್ಕೆ ಒಡ್ಡಿಕೊಳ್ಳುವುದು ಪ್ರಮುಖ ಕಾರಣಗಳಾಗಿವೆ. ಇದರ ಜೊತೆಗೆ, ಧೂಮಪಾನ ಮಾಡದವರಲ್ಲಿ ಇಜಿಎಫ್‌ಆರ್ ನಂತಹ ಆನುವಂಶಿಕ ರೂಪಾಂತರಗಳು ಸಹ ಕ್ಯಾನ್ಸರ್ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತವೆ.
ಗ್ಲೋಬೊಕನ್ 2024ರ ಇತ್ತೀಚಿನ ದತ್ತಾಂಶದ ಪ್ರಕಾರ, ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ಮಾರಕ ರೋಗವಾಗಿ ಹೊರಹೊಮ್ಮಿದೆ. 2024 ಒಂದರಲ್ಲೇ ದೇಶಾದ್ಯಂತ 1,12,659 ಹೊಸ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ, ಭಾರತದಲ್ಲಿ ವರದಿಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇಕಡಾ 7.2 ರಷ್ಟಿದೆ.
ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಈ ಕಾಯಿಲೆಯಿಂದ ಸಂಭವಿಸುವ ಸಾವುಗಳ ಪ್ರಮಾಣ ಅತ್ಯಂತ ಆತಂಕಕಾರಿಯಾಗಿದೆ. 2024 ರಲ್ಲಿ ದೇಶದಲ್ಲಿ 98,687 ಜನರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಭಾರತದಲ್ಲಿ ಸಂಭವಿಸುವ ಒಟ್ಟು ಕ್ಯಾನ್ಸರ್ ಸಾವುಗಳಲ್ಲಿ ಶೇಕಡಾ 10.9 ರಷ್ಟು ಸಾವುಗಳಿಗೆ ಶ್ವಾಸಕೋಶದ ಕ್ಯಾನ್ಸರ್ ಒಂದೇ ಪ್ರಮುಖ ಕಾರಣವಾಗಿದೆ.
ಇನ್ನು ಮಹಿಳೆಯರಲ್ಲಿ ಈ ರೋಗದ ಹರಡುವಿಕೆ ತೀವ್ರವಾಗಿ ಹೆಚ್ಚುತ್ತಿದೆ. ಕಳೆದ ಎರಡು ದಶಕಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ದ್ವಿಗುಣಗೊಂಡಿವೆ. 2004 ರಲ್ಲಿ ಒಟ್ಟು ರೋಗಿಗಳಲ್ಲಿ ಶೇಕಡಾ 20 ರಷ್ಟಿದ್ದ ಮಹಿಳೆಯರ ಪಾಲು, 2024 ರ ವೇಳೆಗೆ ಶೇಕಡಾ 30 ಕ್ಕೆ ಅಂದರೆ ವಾರ್ಷಿಕವಾಗಿ 33,600 ಕ್ಕೂ ಹೆಚ್ಚು ಮಹಿಳೆಯರಿಗೆ ಏರಿಕೆಯಾಗಿರುವುದು ಗಂಭೀರ ಎಚ್ಚರಿಕೆಯಾಗಿದೆ.
ಟಾಟಾ ಮೆಮೋರಿಯಲ್ ಸೆಂಟರ್‌ನ ಕ್ಯಾನ್ಸರ್ ತಜ್ಞ ಡಾ. ಕುಮಾರ್ ಪ್ರಭಾಸ್ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕ್ಷಯರೋಗದ (TB) ಲಕ್ಷಣಗಳು ಒಂದೇ ರೀತಿ ಇರುತ್ತವೆ. ಆರಂಭಿಕ ಹಂತದಲ್ಲಿ ಕೆಮ್ಮು ಕಂಡುಬಂದಾಗ ಅದನ್ನು ಕ್ಷಯರೋಗ ಅಥವಾ ಆಸ್ತಮ ಎಂದು ಭಾವಿಸಿ ಚಿಕಿತ್ಸೆ ನೀಡಲಾಗುವುದರಿಂದ ಸರಿಯಾದ ರೋಗನಿರ್ಣಯ ವಿಳಂಬವಾಗುತ್ತದೆ. ಶ್ವಾಸಕೋಶ ದೊಡ್ಡದಾಗಿರುವುದರಿಂದ ಗೆಡ್ಡೆಗಳು ಮೌನವಾಗಿ ಬೆಳೆಯುತ್ತವೆ ಮತ್ತು ರೋಗ ಪತ್ತೆಯಾಗುವಷ್ಟರಲ್ಲಿ ಕೊನೆಯ ಹಂತಕ್ಕೆ ತಲುಪಿರುತ್ತದೆ.
ಆದ್ದರಿಂದ, ನಿರಂತರ ಕೆಮ್ಮು ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣವೇ ಸೂಕ್ತ ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.