

ಸೂರ್ಯ ಶಕ್ತಿ ಮತ್ತು ಚೇತನದ ಮೂಲ: ಆರೋಗ್ಯಂ ಭಾಸ್ಕರಾದಿಚ್ಛೇತ್- ಆರೋಗ್ಯವನ್ನು ಸೂರ್ಯನಿಂದ ಆಶಿಸಬೇಕು. ಅಂದರೆ ನಿಜವಾದ ಶಕ್ತಿ, ಚೈತನ್ಯ, ಆರೋಗ್ಯ ಇವುಗಳ ಮೂಲ ಸೂರ್ಯ ದೇವರು. ಏಕೆಂದರೆ ಸೂರ್ಯ ದೇವರು ಶಕ್ತಿ, ಚೇತನ, ಜೀವದ ಮೂಲ. ವೇದಗಳಲ್ಲಿ ಆದಿತ್ಯೋ ಜ್ಯೋತಿರಾಶಯಃ ಎಂಬ ವರ್ಣನೆಯಿದೆ. ಆರೋಗ್ಯ, ಉತ್ಸಾಹ ಮತ್ತು ಪ್ರೇರಣೆಗೆ ಸೂರ್ಯೋಪಾಸನೆ ಅತ್ಯಂತ ಮಹತ್ವದ ಅಂಶವಾಗಿದೆ. ಯೋಗದಲ್ಲಿಯೂ ಸೂರ್ಯನಮಸ್ಕಾರ ಎಂಬ ಕ್ರಮದ ಮೂಲಕ ದೇಹಮನಸ್ಸುಪ್ರಾಣದ ಸಮತೋಲನವನ್ನು ಸಾಧಿಸಲಾಗುತ್ತದೆ.
ಸೂರ್ಯನಮಸ್ಕಾರ ಎಂದರೇನು?: ಸೂರ್ಯನಮಸ್ಕಾರ ಎಂದರೆ ಹನ್ನೆರಡು ಆಸನ, ಮುದ್ರೆ, ಪ್ರಾಣಾಯಾಮ ಮತ್ತು ಧಾರಣೆಯ ಸಂಯೋ ಜನೆಯ ಮೂಲಕ ಸೂರ್ಯನ ಚೇತನಕ್ಕೆ ಪ್ರಣಾಮ. ಇದು ಕೇವಲ ವ್ಯಾಯಾಮವಲ್ಲ, ಇದು ಉಸಿರಾಟ, ಮನಸ್ಸು ಮತ್ತು ಭಾವನೆಗಳ ತ್ರಿವೇಣಿ. ಪ್ರಾಚೀನ ಋಷಿಗಳು ಸೂರ್ಯನ ಶಕ್ತಿಯು ಮಾನವ ನಾಡಿಮಂಡಲ ದೊಂದಿಗೆ ನೇರವಾಗಿ ಸಂಬಂಧಿಸಿದೆ ಎಂದು ತಿಳಿದಿದ್ದರು. ಆದ್ದರಿಂದ ಪ್ರತಿಯೊಂದು ಭಂಗಿಯೂ ಪ್ರಾಣಶಕ್ತಿಯನ್ನು ಜಾಗೃತಗೊಳಿಸುತ್ತದೆ.
1. ಸರಿಯಾದ ಎತ್ತರದ ಗೋಡೆಯ ಮುಂದೆ ನಿಂತುಕೊಳ್ಳಿ.
2. ಪಾದ ಗಳನ್ನು ಸ್ವಲ್ಪ ಅಂತರವಿಟ್ಟು ನಿಲ್ಲಿ.
3. ಓಂ ಸೂರ್ಯಾಯ ನಮಃ ಎಂದು ಉಚ್ಚರಿಸಿ ಕೈಗಳ ಪಂಜಗಳನ್ನು ಗೋಡೆಯ ಮೇಲೆ ಹೃದಯದ ಎತ್ತರದಲ್ಲಿ ಇಡಿ.
4. ಉಸಿರೆಳೆಯುತ್ತ ನಿಧಾನವಾಗಿ ದೇಹವನ್ನು ಗೋಡೆಯತ್ತ ತಳ್ಳಿಕೊಳ್ಳಿ. ಒಂದು ಬಾರಿ ಹಣೆಯನ್ನು, ಇನ್ನೊಮ್ಮೆ ಬಲ ಕಿವಿಯನ್ನು, ಮತ್ತೊಮ್ಮೆ ಎಡ ಕಿವಿಯನ್ನು ಗೋಡೆಯತ್ತ ಹತ್ತಿಸಿ ಪ್ರಯತ್ನಿಸಿ. 5.ಉಸಿರುಬಿಡುತ್ತ ನಿಧಾನವಾಗಿ ಹಿಂತಿರುಗಿ ನಿಂತುಕೊಳ್ಳಿ.
6. ಈ ರೀತಿಯ ಗೋಡೆಯ ಪುಷ್ ಅಪ್ಗಳನ್ನು 12, 21, 54 ಅಥವಾ 108 ಬಾರಿ ನಿಧಾನವಾಗಿ ಮಾಡಿ.
ಆಧುನಿಕ ಸಂಶೋಧನೆಗಳು ಹೇಳುವಂತೆ ಸೂರ್ಯ ನಮಸ್ಕಾರದಿಂದ ಆಗುವ ಪ್ರಯೋಜನಗಳು ಇಂತಿವೆ:
ಭುಜ, ಎದೆ, ಕೈ ಮತ್ತು ಬೆನ್ನಿನ ಸ್ನಾಯುಗಳು ಸಕ್ರಿಯ ವಾಗುತ್ತವೆ. ರಕ್ತಸಂಚಲನ ಸುಧಾರಿಸಿ ಹೃದಯಕ್ಕೆ ಚೈತನ್ಯ ದೊರೆಯುತ್ತದೆ. ಹಿರಿಯರು, ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವವರು, ಕಚೇರಿಯಲ್ಲಿ ಹೆಚ್ಚು ಸಮಯ ಕುಳಿತವರಿಗೂ ಸೂಕ್ತ. ದೈನಂದಿನ ಉತ್ಸಾಹ ಮತ್ತು ಉಸಿರಾಟದ ಸಾಮರ್ಥ್ಯ ಹೆಚ್ಚುತ್ತದೆ.
ಗೋಡೆಯೊತ್ತುವ ಯೋಗವ್ಯಾಯಾಮವು ಸೂರ್ಯನಮಸ್ಕಾರದ ಸಾರಾಂಶರೂಪ ಪ್ರಣಾಮ, ಸಮರ್ಪಣೆ ಮತ್ತು ಚೇತನ ಶಕ್ತಿಯ ಸಂಕೇತ. ಗೋಡೆ ಇಲ್ಲಿ ನಮ್ಮ ಆಧಾರ ನಾವು ದೇಹದ ಶಕ್ತಿ, ಮನಸ್ಸಿನ ನಂಬಿಕೆ ಮತ್ತು ಉಸಿರಿನ ತಾಳಮೇಳದಲ್ಲಿ ಯೋಗಾನುಭವ ಪಡೆಯುತ್ತೇವೆ. ಪ್ರತಿ ಬೆಳಿಗ್ಗೆ ಅಥವಾ ಸಂಜೆ ಐದು ನಿಮಿಷ ಗೋಡೆಯೊತ್ತುವ ಯೋಗವ್ಯಾಯಾಮ ಮಾಡಿ ನೋಡಿ ದೇಹ ಸಕ್ರಿಯ, ಮನಸ್ಸು ಶಾಂತ, ಉಸಿರು ಉಜ್ವಲ!