ಹಾವುಗಳಲ್ಲಿ ಬದಲಾದ ವರ್ತನೆ... ಬೇಸಿಗೆಯಲ್ಲಿ ಕೊಂಚ ಯಾಮಾರಿದರೂ ಪ್ರಾಣಕ್ಕೆ ಅಪಾಯ ಫಿಕ್ಸ್​! Snake Bite

ಹಾವುಗಳಲ್ಲಿ ಬದಲಾದ ವರ್ತನೆ... ಬೇಸಿಗೆಯಲ್ಲಿ ಕೊಂಚ ಯಾಮಾರಿದರೂ ಪ್ರಾಣಕ್ಕೆ ಅಪಾಯ ಫಿಕ್ಸ್​! Snake Bite
ಹಾವುಗಳಲ್ಲಿ ಬದಲಾದ ವರ್ತನೆ... ಬೇಸಿಗೆಯಲ್ಲಿ ಕೊಂಚ ಯಾಮಾರಿದರೂ ಪ್ರಾಣಕ್ಕೆ ಅಪಾಯ ಫಿಕ್ಸ್​! Snake Bite
Published on

ಪ್ರಮುಖ ಮುಖ್ಯಾಂಶಗಳು

  • ತಾಪಮಾನ ಹೆಚ್ಚುತ್ತಿದ್ದಂತೆ ವಿಷಪೂರಿತ ಹಾವುಗಳು ಮೊಟ್ಟೆ ಇಟ್ಟು ಮರಿ ಮಾಡಲು ವಸತಿ ಪ್ರದೇಶಗಳತ್ತ ಬರುತ್ತಿವೆ
  • ಪ್ರಸ್ತುತ ಬೇಸಿಗೆ ರಜೆ ಇರುವುದರಿಂದ ಮಕ್ಕಳು ತಮ್ಮ ಹಿತ್ತಲಿನಲ್ಲಿ ಆಟವಾಡುವಾಗ ಹೆಚ್ಚು ಜಾಗರೂಕರಾಗಿರಬೇಕು
  • ಸಾಮಾನ್ಯವಾಗಿ, ಹಾವುಗಳು ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳುಗಳಲ್ಲಿ ಮಿಲನ ಕ್ರಿಯೆ ನಡೆಸುತ್ತವೆ
  • ಇದೀಗ ಫೆಬ್ರವರಿಯವರೆಗೆ ಮಿಲನ ಕ್ರಿಯೆ ನಡೆಸುತ್ತವೆ ಮತ್ತು ಏಪ್ರಿಲ್‌ನಲ್ಲಿ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಜನ್ಮ ನೀಡುತ್ತವೆ
Snake Bite : ತಾಪಮಾನ ಹೆಚ್ಚುತ್ತಿದ್ದಂತೆ ವಿಷಪೂರಿತ ಹಾವುಗಳು ಮೊಟ್ಟೆ ಇಟ್ಟು ಮರಿ ಮಾಡಲು ವಸತಿ ಪ್ರದೇಶಗಳತ್ತ ಬರುತ್ತಿವೆ. ಇತ್ತೀಚೆಗೆ ಕೇರಳದ ಅರಣ್ಯ ಇಲಾಖೆಯ ರಕ್ಷಣಾ ತಂಡ ಉಮಯನಲ್ಲೂರು ಮತ್ತು ಪರವೂರಿನ ಮನೆಯೊಳಗಡೆ ನಾಗಾರಹಾವನ್ನು ಸೆರೆಹಿಡಿಯಿತು. ಇದರ ಬೆನ್ನಲ್ಲೇ ಉರಗ ತಜ್ಞರು ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ.
ಪ್ರಸ್ತುತ ಬೇಸಿಗೆ ರಜೆ ಇರುವುದರಿಂದ ಮಕ್ಕಳು ತಮ್ಮ ಹಿತ್ತಲಿನಲ್ಲಿ ಆಟವಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ, ಹವಾಮಾನ ಬದಲಾವಣೆಯು ಹಾವುಗಳ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ, ಹಾವುಗಳು ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳುಗಳಲ್ಲಿ ಮಿಲನ ಕ್ರಿಯೆ ನಡೆಸುತ್ತವೆ. ಫೆಬ್ರವರಿಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಆದರೆ, ಈಗ ಈ ಪ್ರಕ್ರಿಯೆಯಲ್ಲಿ ಕೊಂಚ ಬದಲಾವಣೆ ಕಂಡುಬಂದಿದೆ. ಅದೇನೆಂದರೆ, ಹಾವುಗಳು ಇದೀಗ ಫೆಬ್ರವರಿಯವರೆಗೆ ಮಿಲನ ಕ್ರಿಯೆ ನಡೆಸುತ್ತವೆ ಮತ್ತು ಏಪ್ರಿಲ್‌ನಲ್ಲಿ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಜನ್ಮ ನೀಡುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಮೊಟ್ಟೆಗಳನ್ನು ಇಟ್ಟು ಮರಿ ಮಾಡಲು ಬೆಚ್ಚಗಿನ ಪ್ರದೇಶಗಳನ್ನು ಹುಡುಕುತ್ತವೆ. ಹೀಗಾಗಿ, ಹಾವುಗಳು ಕೊಟ್ಟಿಗೆಗಳು, ಸೌದೆಗಳ ರಾಶಿ, ಜೋಡಿಸಿದ ಕಲ್ಲುಗಳು, ಬಟ್ಟೆ ಮತ್ತು ಕಸದ ರಾಶಿಗಳಲ್ಲಿ ಇರಲು ಬಯಸುತ್ತವೆ. ಮುಸ್ಸಂಜೆ, ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ಹಾವುಗಳ ಬಗ್ಗೆ ಹೆಚ್ಚಿನ ಜಾಗರೂಕತೆ ಅಗತ್ಯ, ಏಕೆಂದರೆ, ಕೆಲವೊಮ್ಮೆ ಬಿಸಿಲು ಕಾಯಿಸಿಕೊಳ್ಳಲು ಹೊರಬರುತ್ತವೆ ಎಂದು ತಜ್ಞರು ಸದಸ್ಯರು ಎಚ್ಚರಿಸಿದ್ದಾರೆ. ಬೇಸಿಗೆಯಲ್ಲಿ ಮಕ್ಕಳು ಹೊರಗಡೆ ಆಡುವುದರಿಂದ ಹಾವು ಕಡಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹಾವು ಕಚ್ಚಿದರೆ ಏನಾಗುತ್ತದೆ?

ನಾಗರಹಾವು, ಮಂಡಲಹಾವು ಮುಂತಾದ ಹಾವುಗಳ ವಿಷವು ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಇದು ಸ್ನಾಯು ದೌರ್ಬಲ್ಯದಿಂದ ಪ್ರಾರಂಭವಾಗಿ ನಂತರ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಈ ಹಾವುಗಳ ಕಡಿತದಿಂದ ಕೆಲವೊಮ್ಮೆ ಉಸಿರಾಟದ ತೊಂದರೆ, ಕೈಕಾಲುಗಳಲ್ಲಿ ದೌರ್ಬಲ್ಯ, ಮಸುಕಾದ ದೃಷ್ಟಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೆ, ವಿಷದ ಪ್ರಭಾವದಿಂದಾಗಿ ಕಣ್ಣುಗಳನ್ನು ತೆರೆದಿಡಲು ಸಹ ಸಾಧ್ಯವಾಗದಿರಬಹುದು. ಕೆಲವು ಸಂದರ್ಭಗಳಲ್ಲಿ, ಇದು ಮಾರಕ ರಕ್ತಸ್ರಾವ ಅಥವಾ ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು.

ಏನು ಮಾಡಬೇಕು?

ಹಾವು ಕಚ್ಚಿದ ವ್ಯಕ್ತಿಯನ್ನು ಶಾಂತವಾಗಿ ಮತ್ತು ನಿಶ್ಚಲವಾಗಿ ಇಡಬೇಕು. ಏನಾದರೂ ಹಾವು ಕೈಗೆ ಕಚ್ಚಿದರೆ ಆ ಪ್ರದೇಶವನ್ನು ಜೋಲಿ ಅಥವಾ ಸ್ಪ್ಲಿಂಟ್ ಬಳಸಿ ನಿಶ್ಚಲಗೊಳಿಸಬೇಕು ಮತ್ತು ಹೃದಯದ ಮಟ್ಟಕ್ಕಿಂತ ಕೆಳಗೆ ಇಡಬೇಕು. ಕಚ್ಚಿದ ಸ್ಥಳದ ಬಳಿ ಇರುವ ಯಾವುದೇ ಬಿಗಿಯಾದ ಬಟ್ಟೆ ಅಥವಾ ಆಭರಣಗಳನ್ನು ತೆಗೆದುಹಾಕಬೇಕು. ಹಾವು ಕಚ್ಚಿದ ವ್ಯಕ್ತಿಯು ಎದ್ದು ನಡೆಯಬಾರದು. ಈ ಚಲನೆಯು ವಿಷದ ಹರಡುವಿಕೆಯನ್ನು ವೇಗಗೊಳಿಸುತ್ತದೆ.

ಏನು ಮಾಡಬಾರದು?

ಹಾವು ಕಚ್ಚಿದಾಗ ನೀವು ಎಂದಿಗೂ ಮಾಡಬಾರದ ಕೆಲವು ಕೆಲಸಗಳಿವೆ. ಅವುಗಳೆಂದರೆ, ಹಾವು ಕಚ್ಚಿದಾಗ ಉಂಟಾಗುವ ಗಾಯವನ್ನು ಕತ್ತರಿಸುವುದಾಗಲಿ ಅಥವಾ ಬಾಯಿಯಿಂದ ಹೀರುವುದಾಗಲಿ ಮಾಡಬಾರದು. ಐಸ್ ಅಥವಾ ಟೂರ್ನಿಕೆಟ್ ಹಚ್ಚಬಾರದು. ಆಲ್ಕೋಹಾಲ್ ಅಥವಾ ಕೆಫೀನ್ ನೀಡುವುದು ಮತ್ತು ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸುವುದು ಇವೆಲ್ಲವೂ ಮೂರ್ಖತನದ ಕೆಲಸಗಳಾಗಿವೆ. ನೀವು ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ, ನೀವು ತಕ್ಷಣ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. ಈ ಹಂತಗಳನ್ನು ಅನುಸರಿಸಲು ವಿಫಲವಾದರೆ ಸಾವು ಸಂಭವಿಸುತ್ತದೆ.
ಹಾವಿನ ವಿಷದ ಪ್ರಮಾಣ, ಅದರ ಪರಿಣಾಮವು ಜಾತಿಯ ಮೇಲೆ ಮತ್ತು ಕಚ್ಚುವಿಕೆಯ ನಿರ್ದಿಷ್ಟ ಸಂದರ್ಭಗಳನ್ನು ಅವಲಂಬಿಸಿರುತ್ತದೆ. ಯಾವುದೇ ಹಾವು ಕಡಿತದ ಸಂದರ್ಭದಲ್ಲಿ, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮುಖ್ಯ. ಆಧುನಿಕ ಆಂಟಿವೆನಮ್ ಅಥವಾ ಪ್ರತಿವಿಷ ಚಿಕಿತ್ಸೆಯು ಸಾಮಾನ್ಯವಾಗಿ ಹೆಚ್ಚಿನ ಹಾವು ಕಡಿತದ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿದೆ. ಆದಾಗ್ಯೂ, ಉತ್ತಮ ಫಲಿತಾಂಶಕ್ಕಾಗಿ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net