ಸೈಲೆಂಟ್ ಕಿಲ್ಲರ್ ಸ್ಟ್ರೋಕ್: ಪಾರ್ಶ್ವವಾಯು ಬರುವ ಮುನ್ನ ದೇಹ ನೀಡುತ್ತೆ ಈ 5 ಮುನ್ಸೂಚನೆ! | Stroke

Stroke
Stroke
Published on
ಬೆಂಗಳೂರು: ಇತ್ತೀಚಿನ ಬದಲಾದ ಜೀವನಶೈಲಿಯಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ (Stroke) ಪ್ರಕರಣಗಳು ಹೆಚ್ಚಾಗುತ್ತಿವೆ. ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಾಗ ಸಂಭವಿಸುವ ಈ ಸ್ಥಿತಿಯು ಅತ್ಯಂತ ಅಪಾಯಕಾರಿ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ವ್ಯಕ್ತಿ ಶಾಶ್ವತವಾಗಿ ಪಾರ್ಶ್ವವಾಯುವಿಗೆ ಒಳಗಾಗಬಹುದು ಅಥವಾ ಸಾವು ಸಂಭವಿಸಬಹುದು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಸ್ಟ್ರೋಕ್ ಸಂಭವಿಸುವ ವಾರಗಳ ಮೊದಲು ದೇಹವು ಕೆಲವು ಎಚ್ಚರಿಕೆ ಸಂಕೇತಗಳನ್ನು ನೀಡುತ್ತದೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.

ನೀವು ಗಮನಿಸಬೇಕಾದ ಆ 5 ಪ್ರಮುಖ ಎಚ್ಚರಿಕೆ ಲಕ್ಷಣಗಳು ಇಲ್ಲಿವೆ

1. ಅಸಾಮಾನ್ಯ ಮತ್ತು ತೀವ್ರ ತಲೆನೋವು

ಸಾಮಾನ್ಯ ತಲೆನೋವಿಗಿಂತ ಇದು ಭಿನ್ನವಾಗಿರುತ್ತದೆ. ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಅತಿಯಾದ ನೋವು, ತಲೆತಿರುಗುವಿಕೆ ಅಥವಾ ವಾಕರಿಕೆ ಲಕ್ಷಣಗಳು ಮೆದುಳಿನಲ್ಲಿ ರಕ್ತಸ್ರಾವದ ಆರಂಭಿಕ ಸೂಚನೆಯಾಗಿರಬಹುದು.

2. ದೇಹದ ಒಂದು ಭಾಗದಲ್ಲಿ ದೌರ್ಬಲ್ಯ

ಮುಖ, ಕೈ ಅಥವಾ ಕಾಲುಗಳಲ್ಲಿ ಇದ್ದಕ್ಕಿದ್ದಂತೆ ಮರಗಟ್ಟುವಿಕೆ ಕಾಣಿಸಿಕೊಳ್ಳುವುದು ಅಥವಾ ದೌರ್ಬಲ್ಯ ಅನುಭವಿಸುವುದು ಸ್ಟ್ರೋಕ್‌ನ ಪ್ರಮುಖ ಲಕ್ಷಣ. ವಿಶೇಷವಾಗಿ ದೇಹದ ಒಂದು ಬದಿಯಲ್ಲಿ ಮಾತ್ರ ಇಂತಹ ಬದಲಾವಣೆಗಳಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

3. ಮಾತು ಅಸ್ಪಷ್ಟವಾಗುವುದು

ಮಾತನಾಡುವಾಗ ಪದಗಳು ಸಿಗದಿರುವುದು ಅಥವಾ ಎದುರಿಗಿರುವವರು ಹೇಳುವುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು ಮೆದುಳಿನ ಕಾರ್ಯಕ್ಷಮತೆ ಕುಸಿಯುತ್ತಿರುವುದರ ಸಂಕೇತವಾಗಿದೆ.

4. ಹಠಾತ್ ದೃಷ್ಟಿ ದೋಷ

ಕಣ್ಣಿನ ದೃಷ್ಟಿ ಇದ್ದಕ್ಕಿದ್ದಂತೆ ಮಸುಕಾಗುವುದು, ಒಂದು ಕಣ್ಣು ಕಾಣಿಸದಂತಾಗುವುದು ಅಥವಾ ವಸ್ತುಗಳು ಎರಡಾಗಿ ಕಾಣಿಸುವುದು (Double Vision) 'ಮಿನಿ ಸ್ಟ್ರೋಕ್'ನ ಲಕ್ಷಣಗಳಾಗಿರಬಹುದು.

5. ಸಮತೋಲನ ಕಳೆದುಕೊಳ್ಳುವುದು

ನಡೆಯುವಾಗ ಅಸ್ಥಿರತೆ ಉಂಟಾಗುವುದು ಅಥವಾ ವಿವರಿಸಲಾಗದ ತಲೆತಿರುಗುವಿಕೆ ಕಾಣಿಸಿಕೊಂಡರೆ ಅದನ್ನು ಲಘುವಾಗಿ ಪರಿಗಣಿಸಬೇಡಿ. ಇದು ಮೆದುಳಿನ ಭಾಗಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ.

ಪಾರ್ಶ್ವವಾಯು ತಡೆಯುವುದು ಹೇಗೆ?

ಆರೋಗ್ಯಕರ ಜೀವನಶೈಲಿಯಿಂದ ಈ ಅಪಾಯವನ್ನು ಶೇ. 80ರಷ್ಟು ತಡೆಯಬಹುದು. ರಕ್ತದೊತ್ತಡವನ್ನು (BP) ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮೊದಲ ಆದ್ಯತೆಯಾಗಲಿ. ಪ್ರತಿದಿನ ಕನಿಷ್ಠ 30 ನಿಮಿಷಗಳ ನಡಿಗೆ, ಯೋಗ ಅಥವಾ ವ್ಯಾಯಾಮ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿದ್ದರೆ ನಿಮ್ಮ ಮೆದುಳು ಮತ್ತು ಹೃದಯ ಎರಡೂ ಸುರಕ್ಷಿತವಾಗಿರುತ್ತದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net