ಬೆಂಗಳೂರು: ಅಡುಗೆ ಮಾಡುವಾಗ ಬೇಳೆ ಬೇಯಿಸುವಾಗ(Dal Benefits) ನೀರಿನ ಮೇಲೆ ನೊರೆ ಕಾಣಿಸುವುದು ಸಾಮಾನ್ಯ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಬೇಳೆಯ ನೊರೆ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಿಸುತ್ತದೆ”, “ಇದು ಆರೋಗ್ಯಕ್ಕೆ ಹಾನಿಕಾರಕ” ಎಂಬ ಮಾತುಗಳು ಹರಿದಾಡುತ್ತಿವೆ. ಇದರಿಂದ ಹಲವರು ಬೇಳೆ ಬಳಸುವಾಗ ಆತಂಕ ಪಡುತ್ತಿದ್ದಾರೆ. ಆದರೆ ಆರೋಗ್ಯ ತಜ್ಞರು ಮತ್ತು ಪೌಷ್ಟಿಕ ತಜ್ಞರು ಹೇಳುವುದೇ ಬೇರೆ.
ಬೇಳೆಯಲ್ಲಿ ನೊರೆ ಯಾಕೆ ಬರುತ್ತದೆ?
ತಜ್ಞರ ಪ್ರಕಾರ, ಬೇಳೆ ಮತ್ತು ಕಾಳುಗಳಲ್ಲಿ “ಸಪೊನಿನ್” (Saponin) ಎಂಬ ನೈಸರ್ಗಿಕ ಸಂಯೋಗ ಇರುತ್ತದೆ. ಬೇಳೆಯನ್ನು ನೀರಿನಲ್ಲಿ ತೊಳೆಯುವಾಗ ಅಥವಾ ನೆನೆಸುವಾಗ ಮತ್ತು ಕುದಿಸುವಾಗ ಇದೇ ಪದಾರ್ಥ ನೊರೆಯಾಗಿ ಕಾಣಿಸುತ್ತದೆ. ಇದು ಸಂಪೂರ್ಣ ಸಹಜ ಪ್ರಕ್ರಿಯೆ. ಇದರಿಂದ ಆರೋಗ್ಯಕ್ಕೆ ನೇರ ಹಾನಿಯೇನೂ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಯೂರಿಕ್ ಆಸಿಡ್‌ಗೆ ಇದಕ್ಕೆ ಸಂಬಂಧ ಇದೆಯೇ?
ಯೂರಿಕ್ ಆಸಿಡ್ ಹೆಚ್ಚಾಗುವುದು ಮುಖ್ಯವಾಗಿ ದೇಹದಲ್ಲಿ “ಪ್ಯುರಿನ್” (Purine) ಅಂಶ ಹೆಚ್ಚು ಜಮೆಯಾಗುವುದರಿಂದ. ಕೆಲವು ಆಹಾರ ಪದಾರ್ಥಗಳು, ಅತಿಯಾದ ಮಾಂಸಾಹಾರ, ಮದ್ಯಪಾನ, ಅತಿಯಾದ ಸಕ್ಕರೆ ಸೇವನೆ ಹಾಗೂ ಜೀವನಶೈಲಿ ಸಮಸ್ಯೆಗಳು ಯೂರಿಕ್ ಆಸಿಡ್ ಹೆಚ್ಚಲು ಕಾರಣವಾಗುತ್ತವೆ.
ಆದರೆ ಬೇಳೆಯ ಮೇಲಿನ ನೊರೆ ಮತ್ತು ಯೂರಿಕ್ ಆಸಿಡ್ ನಡುವೆ ಯಾವುದೇ ನೇರ ಸಂಬಂಧ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಬೇಳೆ ಭಾರತೀಯ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿದ್ದು, ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಹಾಗೂ ಖನಿಜಾಂಶಗಳು ಸಾಕಷ್ಟು ಇರುತ್ತವೆ.
ಪೌಷ್ಟಿಕ ತಜ್ಞರ ಪ್ರಕಾರ, ಬೇಳೆ ಸೇವನೆಯಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ.
ದೇಹಕ್ಕೆ ಉತ್ತಮ ಪ್ರಮಾಣದ ಪ್ರೋಟೀನ್ ಸಿಗುತ್ತದೆ
ಜೀರ್ಣಕ್ರಿಯೆ ಸುಧಾರಿಸುತ್ತದೆ
ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ
ಹೃದಯ ಆರೋಗ್ಯಕ್ಕೆ ಸಹಕಾರಿ
ದೇಹದ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ
ಹೀಗಾಗಿ ಕೇವಲ ನೊರೆ ಬರುತ್ತದೆ ಎಂಬ ಕಾರಣಕ್ಕೆ ಬೇಳೆ ಸೇವನೆ ನಿಲ್ಲಿಸುವ ಅಗತ್ಯವಿಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬೇಳೆ ಬಳಸುವಾಗ ಏನು ಮಾಡಬೇಕು?
ಅಡುಗೆ ಮಾಡುವ ಮೊದಲು ಬೇಳೆಯನ್ನು ಎರಡು ಅಥವಾ ಮೂರು ಬಾರಿ ಸ್ವಚ್ಛ ನೀರಿನಲ್ಲಿ ತೊಳೆಯುವುದು ಉತ್ತಮ. ಕೆಲವರು ಬೇಳೆಯನ್ನು ಕೆಲ ಗಂಟೆಗಳ ಕಾಲ ನೆನೆಸಿಟ್ಟು ನಂತರ ಅಡುಗೆ ಮಾಡುತ್ತಾರೆ. ಇದರಿಂದ ಬೇಳೆ ಬೇಗ ಬೇಯುವುದರ ಜೊತೆಗೆ ಜೀರ್ಣಕ್ಕೂ ಸುಲಭವಾಗುತ್ತದೆ.
ಸಾಮಾಜಿಕ ಜಾಲತಾಣದ ಮಾಹಿತಿಗೆ ಎಚ್ಚರ
ಆರೋಗ್ಯ ಸಂಬಂಧಿತ ಅನೇಕ ತಪ್ಪು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿವೆ. ವೈದ್ಯರ ಸಲಹೆ ಇಲ್ಲದೆ ಇಂತಹ ಮಾಹಿತಿಗಳನ್ನು ನಂಬಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ಯಾವುದೇ ಆಹಾರ ಪದಾರ್ಥದ ಬಗ್ಗೆ ಅನುಮಾನ ಇದ್ದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ,(ಏಜೆನ್ಸೀಸ್).