ಭಾರತದಲ್ಲಿ ಪಾರ್ಶ್ವವಾಯು ರೋಗಿಗಳ ಪ್ರಮಾಣ ಹೆಚ್ಚಳ

ಪಾರ್ಶ್ವವಾಯು ಸಮಸ್ಯೆ
ಪಾರ್ಶ್ವವಾಯು ಸಮಸ್ಯೆ
Published on

ವಾರ್ಷಿಕವಾಗಿ ಸುಮಾರು 20 ಲಕ್ಷ ಭಾರತೀಯರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರತಿದಿನ ಸರಾಸರಿ 50 ಹೊಸ ಪಾರ್ಶ್ವವಾಯು ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೇಶದ ಸರ್ಕಾರಿ/ ಅರೆಸರ್ಕಾರಿ ಹಾಗೂ ಖಾಸಗಿ ಆರೋಗ್ಯ ವ್ಯವಸ್ಥೆಗಳು ಪಾರ್ಶ್ವವಾಯುವಿಗೆ ಸುವರ್ಣ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಸಜ್ಜಾಗುವುದು ಅನಿವಾರ್ಯ. ಸಾರ್ವಜನಿಕರು ಈ ಕಾಯ್ದೆಯ ಕುರಿತು ಮಾಹಿತಿ ಹಾಗೂ ಸುವರ್ಣ ಸಮಯದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ಜವಾಬ್ದಾರಿ ತೆಗೆದುಕೊಳ್ಳುವುದು ಬಹಳ ಮುಖ್ಯ.

‘ಇಂಟರ್​ನ್ಯಾಷನಲ್ ಜರ್ನಲ್ ಆಫ್ ಸ್ಟ್ರೋಕ್’ ಎಂಬ ಅಂತಾರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಹೊಸ ಅಧ್ಯಯನವೊಂದು ಪ್ರಕಟವಾಗಿದೆ. ಇದರ ಅಂಕಿ ಅಂಶಗಳು ವೈದ್ಯ ಜಗತ್ತನ್ನು ಬೆಚ್ಚಿ ಬೀಳಿಸಿವೆ. ಡಾ. ಪ್ರಶಾಂತ್ ಮಾಥೂರ್ ಮತ್ತು ಸಂಗಡಿಗರು ‘ನ್ಯಾಷನಲ್ ಸ್ಟ್ರೋಕ್ ರಿಜಿಸ್ಟ್ರಿ ಪೋ›ಗ್ರಾಮ್ ಎಂಬ ಅಧ್ಯಯನದ ಹೆಸರಿನಲ್ಲಿ ಎರಡು ವರ್ಷಗಳ ಕಾಲ ಭಾರತದ ವಿವಿಧ ಪ್ರದೇಶಗಳ ಸುಮಾರು 30 ಪ್ರಮುಖ ಆಸ್ಪತ್ರೆಗಳಲ್ಲಿ ದಾಖಲಾದ 34,792 ಪಾರ್ಶ್ವವಾಯು ರೋಗಿಗಳ ಕಾಯಿಲೆಯ ಇತಿಹಾಸ, ದೊರೆತ ಚಿಕಿತ್ಸಾ ವಿಧಾನ ಮತ್ತು ಚೇತರಿಕೆಯ ಪ್ರಮಾಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಧ್ಯಯನದ ವರದಿಗಳನ್ನು ಪ್ರಕಟಿಸಿದ್ದಾರೆ.

ಶೇಕಡ 13.8ರಷ್ಟು ರೋಗಿಗಳು 45 ವರ್ಷದ ಕೆಳಗಿನವರಾಗಿದ್ದು ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಶೇ. 72.1ರಷ್ಟು ರೋಗಿಗಳು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು, ಅಧಿಕ ರಕ್ತದೊತ್ತಡ ಶೇ. 74.5ರಷ್ಟು ರೋಗಿಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಿದೆ. ಭಾರತದಲ್ಲಿ 31.5 ಕೋಟಿಗೂ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು. ಧೂಮಪಾನರಹಿತ ತಂಬಾಕು ಸೇವನೆ (ಗುಟ್ಕಾ ಇತ್ಯಾದಿ) ಪ್ರಕರಣಗಳು ವಿಪರೀತ ಹೆಚ್ಚಾಗುತ್ತಿದ್ದು ಸುಮಾರು ಶೇ. 28.5ರಷ್ಟು ಪ್ರಕರಣಗಳಲ್ಲಿ ಇವು ಪತ್ತೆಯಾಗಿವೆ. ಭಾರತವನ್ನು ಮಧುಮೇಹಿಗಳ ರಾಜಧಾನಿ ಎಂದು ಕರೆಯುತ್ತಾರೆ. ಶೇ. 27.3ರಷ್ಟು ಪ್ರಕರಣಗಳಲ್ಲಿ ರೋಗಿಗಳು ಮಧುಮೇಹಿಗಳಾಗಿದ್ದು ಈ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಕೇವಲ ಶೇ. 20.1ರಷ್ಟು ರೋಗಿಗಳು ಪಾರ್ಶ್ವವಾಯು ಸಂಭವಿಸಿದ ಸುವರ್ಣ ಸಮಯದಲ್ಲಿ (ಗೋಲ್ಡನ್ ಅವರ್- ಮೊದಲ 4.5 ಗಂಟೆಗಳ ಒಳಗೆ) ಆಸ್ಪತ್ರೆಗೆ ತಲುಪಿದ್ದಾರೆ. ಶೇ. 37.8ರಷ್ಟು ರೋಗಿಗಳು 24 ಗಂಟೆಗಳ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಚೇತರಿಕೆಯ ಪ್ರಮಾಣ ಕಡಿಮೆಯಾಗಿದೆ. ಇನ್ನು ಚಿಕಿತ್ಸೆಯ ವಿಚಾರಗಳಿಗೆ ಬರುವುದಾದರೆ ಮಿದುಳಿನ ರಕ್ತನಾಳಗಳ ಹೆಪ್ಪುಗಟ್ಟುವಿಕೆಯನ್ನು ಕರಗಿಸುವ ಇಂಟ್ರಾವೆನಸ್ ತ್ರೊಂಬೊಲೈಸಿಸ್ ಚಿಕಿತ್ಸೆ ಕೇವಲ ಶೇ. 4.6ರಷ್ಟು ರೋಗಿಗಳಿಗೆ ನೀಡಲಾಗಿದೆ. ಸಿಂಗಾಪುರದಂತಹ ಮುಂದುವರಿದ ದೇಶಗಳಲ್ಲಿ ಈ ಪ್ರಮಾಣ ಶೇ. 20ರಷ್ಟಿದೆ.

ಅಮೆರಿಕದಲ್ಲಿ ಶೇ. 28ರಷ್ಟಿದೆ. ವಾರ್ಷಿಕವಾಗಿ ಭಾರತದಲ್ಲಿ ಸುಮಾರು 55 ಸಾವಿರದಿಂದ 60 ಸಾವಿರ ಮಂದಿ ಈ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ ಚಿಕಿತ್ಸೆ ಅವಶ್ಯಕತೆ ಮತ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ವಾಸ್ತವ ಸಂಖ್ಯೆಗೂ ಇರುವ ಅಗಾಧ ವ್ಯತ್ಯಾಸವನ್ನು ನಾವು ಗಮನಿಸಬಹುದು. ಮಿದುಳಿನ ದೊಡ್ಡ ದೊಡ್ಡ ರಕ್ತನಾಳಗಳು ಕಟ್ಟಿಕೊಂಡಾಗ ವೈದ್ಯರು ನೀಡುವ ಮೆಕ್ಯಾನಿಕಲ್ ತ್ರೊಂಬೆಕ್ಟಮಿ ಚಿಕಿತ್ಸೆಯ ಪ್ರಮಾಣ ಇನ್ನೂ ಶೋಚನೀಯವಾಗಿದೆ. ಈ ಅಧ್ಯಯನದಲ್ಲಿ ಕೇವಲ ಶೇ. 0.7ರಷ್ಟು ರೋಗಿಗಳು ಈ ಚಿಕಿತ್ಸೆ ಪಡೆದಿದ್ದಾರೆ. ಭಾರತದಲ್ಲಿ ಅಧ್ಯಯನಗಳ ಪ್ರಕಾರ ಸುಮಾರು 2 ಲಕ್ಷ ರೋಗಿಗಳಿಗೆ ಈ ಚಿಕಿತ್ಸೆ ಅವಶ್ಯಕತೆ ಇದ್ದರೂ ಕೇವಲ ಆರರಿಂದ ಏಳು ಸಾವಿರ ಮಂದಿ ವಾರ್ಷಿಕವಾಗಿ ಈ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಅಧ್ಯಯನದ ಅಂಕಿ ಅಂಶಗಳು ನಮ್ಮ ದೇಶದಲ್ಲಿನ ಪಾರ್ಶ್ವವಾಯು ಕುರಿತಾದ ಸಾರ್ವಜನಿಕರ ಅರಿವಿನ ಕೊರತೆ, ಪಾರ್ಶ್ವವಾಯು ಸಂಭವಿಸಿದ ಬಳಿಕ ಗೋಲ್ಡನ್ ಅವರ್​ನಲ್ಲಿ ಆಸ್ಪತ್ರೆಗೆ ಹೋಗುವಲ್ಲಿನ ಅಡೆತಡೆಗಳು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅನಿಯಂತ್ರಿತ ಬೆಳವಣಿಗೆ, ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳ ಕೊರತೆ, ತರಬೇತಿ ಹೊಂದಿದ ವೈದ್ಯರ ಅಭಾವ ಮತ್ತು ಆರೋಗ್ಯ ವ್ಯವಸ್ಥೆಯು ಈ ಮಾರಣಾಂತಿಕ ಕಾಯ್ದೆಯನ್ನು ಎದುರಿಸಲು ಸಿದ್ಧವಾಗಿಲ್ಲದೆ ಇರುವುದನ್ನು ಸೂಚಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು 2010ನೇ ಇಸವಿಯಲ್ಲಿಯೇ ಪಾರ್ಶ್ವವಾಯು ಕಾಯಿಲೆಯನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೊಷಿಸಿ ಸದಸ್ಯ ದೇಶಗಳಿಗೆ ಈ ಕುರಿತು ಹೆಚ್ಚಿನ ಗಮನಹರಿಸುವಂತೆ ಸೂಚನೆ ನೀಡಿದರೂ ಬಹುತೇಕ ದೇಶಗಳ ಸರ್ಕಾರಗಳು ಹಾಗೂ ಆರೋಗ್ಯ ವ್ಯವಸ್ಥೆ ಈ ಕುರಿತು ಹೆಚ್ಚಿನ ಗಮನ ನೀಡಿಲ್ಲದಿರುವುದನ್ನು ಈ ಅಧ್ಯಯನ ಸಾಬೀತು ಪಡಿಸುತ್ತದೆ.

ದೇಶ ಜನಸಂಖ್ಯೆ ವಾರ್ಷಿಕ ಪಾರ್ಶ್ವವಾಯು ಪ್ರಕರಣಗಳು

  • ಸಿಂಗಾಪುರ 5.9 ಮಿಲಿಯನ್ 8-9 ಸಾವಿರ
  • ಜರ್ಮನಿ 84 ಮಿಲಿಯನ್ 2.70 ಲಕ್ಷ
  • ಅಮೆರಿಕ 335 ಮಿಲಿಯನ್ 7.95 ಲಕ್ಷ
  • ಚೀನಾ 1.41 ಬಿಲಿಯನ್ 34-36 ಲಕ್ಷ
  • ಭಾರತ 1.46 ಬಿಲಿಯನ್ 18 ಲಕ್ಷ-20 ಲಕ್ಷ

ಸರ್ಕಾರ ಏನು ಮಾಡಬಹುದು?

1. ಸಾರ್ವಜನಿಕರಲ್ಲಿ ಪಾರ್ಶ್ವವಾಯು ಕುರಿತು ಜಾಗೃತಿ ಮೂಡಿಸಲು ದೇಶಾದ್ಯಂತ ಅಭಿಯಾನ ನಡೆಸಬೇಕು.

2. ಐವತ್ತು ಹಾಸಿಗೆಗಳಿಗಿಂತ ಹೆಚ್ಚಿನ ಹಾಸಿಗೆಗಳಿರುವ ದೇಶದ ಎಲ್ಲ ಆಸ್ಪತ್ರೆಗಳಲ್ಲಿಯೂ ಪಾರ್ಶ್ವವಾಯು ಚಿಕಿತ್ಸೆಗೆ ನೀಡುವ ಮೂಲಭೂತ ಸೌಕರ್ಯಗಳು ಹಾಗೂ ಪ್ರಮಾಣೀಕೃತ ಚಿಕಿತ್ಸಾ ವಿಧಾನಗಳು ಕಡ್ಡಾಯವಾಗಿ ಇರುವಂತೆ ಆದೇಶ ನೀಡಬೇಕು.

3. ಸುವರ್ಣ ಸಮಯದಲ್ಲಿ ನೀಡುವ ತ್ರೊಂಬೊಲೈಸಿಸ್ ಚಿಕಿತ್ಸೆಗೆ ಬೇಕಾದ ಔಷಧ ಉಚಿತವಾಗಿ ದೊರಕುವಂತೆ ಕ್ರಮ ವಹಿಸಬೇಕು.

4. ಜಿಲ್ಲೆಗಳ ಪ್ರಮುಖ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ತಜ್ಞರಿಂದ ಕಾರ್ಯಾ ಗಾರ ನಡೆಸಿ ಪಾರ್ಶ್ವವಾಯು ಚಿಕಿತ್ಸೆ ತರಬೇತಿ ಕೊಡಿಸಬೇಕು.

5. ಶಾಲೆಗಳ ಪಠ್ಯಪುಸ್ತಕಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳ ಕುರಿತು ಹೆಚ್ಚಿನ ಮಾಹಿತಿ ನೀಡುವುದರ ಮೂಲಕ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು.

6. ವೈದ್ಯ ವಿದ್ಯಾರ್ಥಿಗಳಿಗೆ, ಫಿಸಿಶಿಯನ್ ತಜ್ಞರಿಗೆ ಹಾಗೂ ನರರೋಗ ವಿದ್ಯಾರ್ಥಿಗಳಿಗೆ ಪಾರ್ಶ್ವವಾಯು ಚಿಕಿತ್ಸೆ ಕುರಿತು ಹೆಚ್ಚಿನ ತರಬೇತಿ ನೀಡಬೇಕು. ವೈದ್ಯ ಸಂಘಟನೆಗಳು ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.

7. ಹಿಮಾಚಲಪ್ರದೇಶದಲ್ಲಿ ಯಶಸ್ವಿಯಾದ ಟೆಲಿ ಸ್ಟ್ರೋಕ್ ವಿಧಾನವನ್ನು ದೇಶಾದ್ಯಂತ ಪ್ರಮುಖ ಆಸ್ಪತ್ರೆಗಳ ನೇತೃತ್ವದಲ್ಲಿ ಗ್ರಾಮೀಣ ಭಾಗದ ರೋಗಿಗಳಿಗೆ ದೊರಕುವಂತೆ ಮಾಡಬೇಕು.

8. ಮೆಕ್ಯಾನಿಕಲ್ ತ್ರೊಂಬೆಕ್ಟಮಿ ಚಿಕಿತ್ಸೆ ಈಗ ದೇಶದ ಆಯುಧ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದ್ದು ದುಬಾರಿಯಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಕೇಂದ್ರ ಸರ್ಕಾರ ಇನ್ನೂ ಹೆಚ್ಚು ವೈದ್ಯರಿಗೆ ತರಬೇತಿ ನೀಡುವ ಪಠ್ಯಕ್ರಮಗಳನ್ನು ಜಾರಿಗೊಳಿಸಿ ಚಿಕಿತ್ಸೆಗೆ ಬೇಕಾದ ವೆಚ್ಚವನ್ನು ಆಯುಷ್ಮಾನ್ ಭಾರತ ಯೋಜನೆಯಡಿ ಭರಿಸುವ ಕ್ರಮ ಕಡ್ಡಾಯಗೊಳಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net