

ದಶಕಗಳಿಂದ, ಹೃದಯದ ಅಸಹಜ ಬಡಿತಕ್ಕೆ ಚಿಕಿತ್ಸೆ ನೀಡುವಾಗ ಶಸ್ತ್ರಚಿಕಿತ್ಸಕರು ಬಹುತೇಕ ತಮ್ಮ ವೈದ್ಯಕೀಯ ಜ್ಞಾನ ಹಾಗೂ ಹೃದಯದ ರಚನೆಯ ಬಗೆಗಿನ ಅರಿವಿನಿಂದ ಬೆಂಬಲಿತವಾದ ಸಹಜ ಪ್ರವೃತ್ತಿಗಳ (instincts) ಆಧಾರದ ಮೇಲೆ ಅವರು ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ತೆಳುವಾದ ಪೈಪ್ಗಳನ್ನು (ಕ್ಯಾಥೆಟರ್) ರಕ್ತನಾಳಗಳ ಮೂಲಕ ಹೃದಯಕ್ಕೆ ತಲುಪಿಸಲು ಸಾಮಾನ್ಯ 2D ಎಕ್ಸ್-ರೇ ಚಿತ್ರಗಳನ್ನು ಬಳಸಲಾಗುತ್ತಿತ್ತು. ಅಂದರೆ, ಚಪ್ಪಟೆಯಾದ, ಕೇವಲ ನೆರಳಿನಂತೆ ಕಾಣುವ ಚಿತ್ರಗಳನ್ನು ನೋಡಿ ಡಾಕ್ಟರ್ಗಳು ವೈದ್ಯಕೀಯ ಜ್ಞಾನ ಹಾಗೂ ಹೃದಯದ ರಚನೆಯ ಬಗೆಗಿನ ತಮ್ಮ ಅರಿವನ್ನು ಆಧಾರಿಸಿ ಹೃದಯದ ನಿಜವಾದ ಆಕಾರವನ್ನು ಊಹಿಸಿಕೊಳ್ಳಬೇಕಿತ್ತು. ಈ ಹಳೆಯ ವಿಧಾನದಿಂದ ಕೆಲಸವೇನೋ ನಡೆಯುತ್ತಿತ್ತು, ಆದರೆ ತೊಂದರೆಗಳೂ ಸಾಕಷ್ಟಿದ್ದವು: ಚಿಕಿತ್ಸೆಗೆ ಹೆಚ್ಚಿನ ಸಮಯ ಬೇಕಾಗುತ್ತಿತ್ತು, ದೇಹಕ್ಕೆ ಅಪಾಯಕಾರಿ ವಿಕಿರಣಗಳು (ರೇಡಿಯೇಶನ್) ಹೆಚ್ಚು ತಾಕುತ್ತಿದ್ದವು ಮತ್ತು ಅಸಹಜ ಬಡಿತಕ್ಕೆ ಕಾರಣವಾದ ಹೃದಯದ ನಿಖರ ಭಾಗವನ್ನು ಗುರುತಿಸುವುದು ಕಷ್ಟವಾಗುತ್ತಿತ್ತು. ಆದರೆ ಇಂದು, ಮುಂದುವರಿದ 3D ಕಾರ್ಡಿಯಾಕ್ ಮ್ಯಾಪಿಂಗ್ ವ್ಯವಸ್ಥೆಯಿಂದಾಗಿ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.
ಸರಳ ವಾಖ್ಯಗಳಲ್ಲಿ 3D ಮ್ಯಾಪಿಂಗ್ ತಂತ್ರಜ್ಞಾನವನ್ನು ವಿಶ್ಲೇಷಿಸುವುದಾದರೆ, ಸೆನ್ಸರ್ ಹೊಂದಿರುವ ತೆಳುವಾದ ವೈರ್ಗಳನ್ನು ಹೃದಯದ ಒಳಗೆ ಕಳುಹಿಸಿ, ಹೃದಯದ ಕೋಣೆಗಳು ಮತ್ತು ಅಲ್ಲಿ ಹರಿಯುವ ವಿದ್ಯುತ್ ಸಂಕೇತಗಳ ಒಂದು ಜೀವಂತ ಚಿತ್ರಣವನ್ನು (3D ಮಾಡೆಲ್) ತಯಾರಿಸಲಾಗುತ್ತದೆ. ಈ ವೈರ್ನ ತುದಿಯು ಹೃದಯದ ಬೇರೆ ಬೇರೆ ಭಾಗಗಳನ್ನು ಸ್ಪರ್ಶಿಸಿದಂತೆಲ್ಲಾ, ಸಿಸ್ಟಮ್ ಆ ಜಾಗದ ನೆಲೆ ಮತ್ತು ವಿದ್ಯುತ್ ಸಂಕೇತಗಳನ್ನು ದಾಖಲಿಸಿಕೊಳ್ಳುತ್ತದೆ. ನಂತರ, ಇಡೀ ಪ್ರದೇಶವನ್ನು ರಂಗುರಂಗಿನ ನಕ್ಷೆಯಂತೆ (ಮ್ಯಾಪ್) ತೆರೆಯ ಮೇಲೆ ತೋರಿಸುತ್ತದೆ. ಎಲ್ಲಿಂದ ಈ ಬಡಿತದ ಏರುಪೇರು ಶುರುವಾಗುತ್ತಿದೆ ಮತ್ತು ಅದು ಹೇಗೆ ಹರಡುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಉದಾಹರಣೆಗೆ, ಕೆಂಪು ಬಣ್ಣದಲ್ಲಿ ಕಾಣುವ ಜಾಗವು ಅತಿಯಾದ ಅಥವಾ ಅಸಹಜ ವಿದ್ಯುತ್ ಸಂಕೇತವನ್ನು ಸೂಚಿಸಿದರೆ, ನೇರಳೆ ಬಣ್ಣವು ಆರೋಗ್ಯಕರ ಭಾಗವನ್ನು ತೋರಿಸುತ್ತದೆ. ಇದರಿಂದಾಗಿ, ಹಿಂದೆ ಊಹೆಯ ಮೇಲೆ ನಡೆಯುತ್ತಿದ್ದ ಚಿಕಿತ್ಸೆ ಈಗ ಅತ್ಯಂತ ನಿಖರವಾದ ಮಾರ್ಗವನ್ನು ಕಂಡುಕೊಂಡಿದೆ.
ಇದರಿಂದ ರೋಗಿಗಳಿಗೆ ಸಿಗುವ ವೈದ್ಯಕೀಯ ಪ್ರಯೋಜನಗಳು ಅಪಾರ. ಹೃದಯದ ಮೇಲ್ಭಾಗ ಅಥವಾ ಕೆಳಭಾಗದ ಕೋಣೆಗಳಲ್ಲಿ ಕಂಡುಬರುವ ಅಸಹಜ ಬಡಿತಗಳಿಗೆ (ಉದಾಹರಣೆಗೆ ಏಟ್ರಿಯಲ್ ಫಿಬ್ರಿಲೇಷನ್, ವೆಂಟ್ರಿಕುಲರ್ ಟ್ಯಾಕಿಕಾರ್ಡಿಯಾ ಮುಂತಾದ ತೊಂದರೆಗಳು) ಮೂಲ ಕಾರಣವೆಲ್ಲಿದೆ ಎಂಬುದನ್ನು ಡಾಕ್ಟರ್ಗಳು ಈಗ ಬಹಳ ಸುಲಭವಾಗಿ ಕಂಡುಹಿಡಿಯಬಹುದು. ಈ ನಿಖರತೆಯಿಂದಾಗಿ "ಕ್ಯಾಥೆಟರ್ ಅಬ್ಲೇಶನ್" ಚಿಕಿತ್ಸೆ ಹೆಚ್ಚು ಯಶಸ್ವಿಯಾಗುತ್ತದೆ. ಅಂದರೆ, ತಪ್ಪು ಸಂಕೇತಗಳನ್ನು ನೀಡುವ ಹೃದಯದ ಸಣ್ಣ ಭಾಗವನ್ನು ಬಿಸಿ ಅಥವಾ ತಂಪಾದ ಶಕ್ತಿಯನ್ನು ಬಳಸಿ ಸರಿಪಡಿಸುವ ಪ್ರಕ್ರಿಯೆ ಇದು. 3D ಮ್ಯಾಪ್ ಎಲ್ಲಿ ಚಿಕಿತ್ಸೆ ನೀಡಬೇಕೆಂದು ನಿಖರವಾಗಿ ತೋರಿಸುವುದರಿಂದ, ಒಳ್ಳೆಯ ಅಂಗಾಂಶಗಳಿಗೆ ಯಾವುದೇ ಹಾನಿಯಾಗದೆ, ಕಡಿಮೆ ಸಮಯದಲ್ಲಿ ಸುಲಭವಾಗಿ ಚಿಕಿತ್ಸೆ ಮುಗಿಯುತ್ತದೆ.
ಬಹುಶಃ ಈ ತಂತ್ರಜ್ಞಾನದ ದೊಡ್ಡ ಅನುಕೂಲ ಎಂದರೆ ರೇಡಿಯೇಶನ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು. ಹಿಂದೆ ಕ್ಯಾಥೆಟರ್ಗಳನ್ನು ನಿಯಂತ್ರಿಸಲು 'ಫ್ಲೋರೋಸ್ಕೋಪಿ' ಎಂಬ ಎಕ್ಸ್-ರೇ ವಿಧಾನವನ್ನು ಬಳಸಲಾಗುತ್ತಿತ್ತು. ಆದರೆ ಇಂದಿನ ಆಧುನಿಕ ಮ್ಯಾಪಿಂಗ್ ಸಿಸ್ಟಮ್ಗಳಿಂದಾಗಿ, ಅತ್ಯಂತ ಕಡಿಮೆ ಅಥವಾ ಯಾವುದೇ ರೇಡಿಯೇಶನ್ ಇಲ್ಲದೆಯೂ ಇಡೀ ಚಿಕಿತ್ಸೆಯನ್ನು ಪೂರ್ಣಗೊಳಿಸಬಹುದು. ಇದು ರೋಗಿಗಳಿಗೆ ಮಾತ್ರವಲ್ಲ, ದಿನವಿಡೀ ಈ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿಗೂ ದೊಡ್ಡ ರಿಲೀಫ್. ಇಷ್ಟೇ ಅಲ್ಲದೆ, ಸಿಟಿ (CT) ಅಥವಾ ಎಂಆರ್ಐ (MRI) ಸ್ಕ್ಯಾನ್ ಚಿತ್ರಗಳನ್ನು ನೇರವಾಗಿ ಈ 3D ನಕ್ಷೆಯೊಂದಿಗೆ ಸಂಯೋಜಿಸಲು ಸಾಧ್ಯವಿರುವುದರಿಂದ, ಹೃದಯದ ರಚನೆ ಮತ್ತು ವಿದ್ಯುತ್ ಸಂಕೇತಗಳೆರಡನ್ನೂ ಒಟ್ಟಿಗೆ ನೋಡಿ ಇನ್ನು ಹೆಚ್ಚಿನ ನಿಖರತೆಯಿಂದ ಚಿಕಿತ್ಸೆ ನೀಡಬಹುದು.
ಒಮ್ಮೆ ಚಿಕಿತ್ಸೆ ನೀಡುವುದು ಜಟಿಲ ಮತ್ತು ಅಪಾಯಕಾರಿ ಎನಿಸುತ್ತಿದ್ದ ಅದೆಷ್ಟೋ ಹೃದಯ ಸಂಬಂಧಿ ತೊಂದರೆಗಳನ್ನು ಈಗ ಸುಲಭವಾಗಿ ನಿರ್ವಹಿಸಬಹುದು. ಹೃದಯಾಘಾತದ ನಂತರ ಉಂಟಾಗುವ ಗಾಯದ ಕಲೆಗಳಿಂದ ಬರುವ ಅಸಹಜ ಬಡಿತ, ಅಥವಾ ಹುಟ್ಟಿನಿಂದ ಬಂದ ಅಪರೂಪದ ಬಡಿತದ ಸಮಸ್ಯೆ ಇರುವ ರೋಗಿಗಳಿಗೆ ಮೊದಲ ಪ್ರಯತ್ನದಲ್ಲೇ ಸುರಕ್ಷಿತವಾಗಿ ಮತ್ತು ವೇಗವಾಗಿ ಚಿಕಿತ್ಸೆ ನೀಡಲು ಇದು ನೆರವಾಗುತ್ತಿದೆ.
ಈಗ ಈ ಸಿಸ್ಟಮ್ಗಳ ಜೊತೆಗೆ ಕೃತಕ ಬುದ್ಧಿಮತ್ತೆ (AI) ಸೇರ್ಪಡೆಯೂ ಆಗುತ್ತಿರುವುದು, ಹೃದಯ ಬಡಿತದ ಏರುಪೇರುಗಳನ್ನು ಮೊದಲೇ ಅಂದಾಜಿಸಲು ಮತ್ತು ವಿಶ್ಲೇಷಿಸಲು ಸಹಕಾರಿಯಾಗಿದೆ. ಕೇವಲ ಹೃದಯದ ಒಳಗಿನ ಚಿತ್ರವನ್ನು ನೋಡಲು ಶುರುವಾದ ಒಂದು ಸಾಧನ, ಇಂದು ಆಧುನಿಕ ಹೃದಯ ಚಿಕಿತ್ಸಾ ವಿಜ್ಞಾನದ ಮುಖ್ಯ ಅಂಗವಾಗಿ ಬೆಳೆದುನಿಂತಿದೆ. ಒಮ್ಮೆ ಅಪಾಯಕಾರಿ ಮತ್ತು ಅನಿಶ್ಚಿತ ಎನಿಸುತ್ತಿದ್ದ ಶಸ್ತ್ರಚಿಕಿತ್ಸೆಗಳು, ಇಂದು ತಂತ್ರಜ್ಞಾನ ಮತ್ತು ದತ್ತಾಂಶಗಳ ಆಧಾರದ ಮೇಲೆ ಅತ್ಯಂತ ಸುರಕ್ಷಿತವಾಗಿ ನಡೆಯುತ್ತಿದ್ದು, ಲಕ್ಷಾಂತರ ರೋಗಿಗಳ ಜೀವನಕ್ಕೆ ಹೊಸ ಭರವಸೆ ನೀಡುತ್ತಿವೆ.