ಟೀ-ಕಾಫಿ ಜೊತೆ ಈ ಆಹಾರಗಳನ್ನು ತಿನ್ನೋದ್ರಿಂದ ಏನೆಲ್ಲ ಸಮಸ್ಯೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Tea

ಟೀ-ಕಾಫಿ
ಟೀ-ಕಾಫಿ
Published on
Tea: ಚಹಾ-ಕಾಫಿ ಇಲ್ಲದ ದಿನವೇ ಇಲ್ಲ, ದಿನಚರಿಯೂ ಇಲ್ಲ ಎಂಬುದು ಹಲವರ ಮಾತು. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್​ ಬಿಸಿ ಬಿಸಿ ಟೀ ಅಥವಾ ಕಾಫಿ ಕುಡಿದರೆ, ಮುಂದಿನ ಎಲ್ಲ ಕೆಲಸಗಳು ಸರಳ, ಸುಲಭ, ಸುಂದರ ಎಂಬ ಗಟ್ಟಿಯಾದ ಭಾವನೆ ಹಲವರಿಗಿದೆ. ಅದರಲ್ಲೂ, ಚಹಾದೊಂದಿಗೆ ಒಂದೆರೆಡು ಬಿಸ್ಕತ್ತು, ಬನ್​, ಬ್ರೆಡ್​ ತುಂಡಗಳಿದ್ದರಂತು ಆಹಾ! ಅದರ ಮಜಾವೇ ಬೇರೆ ಬಿಡಿ. ಈ ಅಭ್ಯಾಸ ಕೆಲವರಿಗಲ್ಲ, ಹಲವರಿಗಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ.
ಬೆಳಗ್ಗಿನ ಸಮಯದಲ್ಲಿ ಟೀ ಜತೆ ಬಿಸ್ಕತ್​, ಬ್ರೆಡ್​ ಸೇವಿಸುವ ಚಹಾ-ಕಾಫಿ ಪ್ರಿಯರು, ಅದೇ ಸಂಜೆ ವೇಳೆ ಸ್ಯಾಂಡ್​ವಿಚ್​, ಪಕೋಡಾ, ಸಮೋಸಾ ಸೇರಿದಂತೆ ಎಣ್ಣೆಯಲ್ಲಿ ಕರಿದ ಬಿಸಿ ಬಿಸಿ ತಿನಿಸುಗಳ ರುಚಿ ಸವಿಯಲು ಬಯಸುತ್ತಾರೆ. ಅಸಲಿಗೆ, ಇದು ನಾಲಿಗೆಗೆ ಹಿತ, ಒಳ್ಳೆಯ ರುಚಿ ನೀಡುವುದೇ ಆದರೂ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಗಂಭೀರ ಹಾನಿ ಮಾಡುವುದಂತು ಕಟ್ಟಿಟ್ಟಬುತ್ತಿ. ಅಷ್ಟಕ್ಕೂ, ಯಾವೆಲ್ಲ ಆಹಾರಗಳೊಂದಿಗೆ ಅಥವಾ ಪದಾರ್ಥಗಳ ಜತೆ ಟೀ-ಕಾಫಿ ಕುಡಿಯುವುದು ಡೇಂಜರ್​ ಎಂಬ ಮಾಹಿತಿ ಇಲ್ಲಿದೆ ನೋಡಿ.

ಎಣ್ಣೆಯಲ್ಲಿ ಕರಿದ ತಿನಿಸುಗಳು

ಪಕೋಡಾ, ಬಜ್ಜಿ, ಸಮೋಸಾ ಈವೆಲ್ಲವೂ ತುಂಬಾ ರುಚಿಕರವಾದ ತಿಂಡಿಗಳೇ ನಿಜ. ಆದರೆ, ಈ ಆಹಾರಗಳನ್ನು ಎಣ್ಣೆಯಲ್ಲಿ ಡೀಪ್​ ಫ್ರೈ ಮಾಡುವುದರಿಂದ ಇದು ಟೀ-ಕಾಫಿಗೆ ಉತ್ತಮ ಹೊಂದಾಣಿಕೆ ಅಲ್ಲವೇ ಅಲ್ಲ. ರುಚಿ ವಿಚಾರದಲ್ಲಿ ನೋಡುವುದಾದರೆ ಸಖತ್ ಕಾಂಬಿನೇಷನ್​. ಆದರೆ, ಆರೋಗ್ಯದ ವಿಷಯದಲ್ಲಿ ಇದು ಹೊಟ್ಟೆ ನೋವು ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ಕಬ್ಬಿಣಾಂಶ ಅಧಿಕವಿರುವ ಆಹಾರಗಳು

ಕಬ್ಬಿಣಾಂಶ ಹೆಚ್ಚಿರುವ ಆಹಾರಗಳಾದ ಸೊಪ್ಪು, ತರಕಾರಿಗಳು, ದ್ವಿದಳ ಧಾನ್ಯಗಳ ಜತೆ ಚಹಾ ಸವಿಯಬಾರದು. ಟೀ ಟ್ಯಾನಿನ್‌ಗಳು ಮತ್ತು ಆಕ್ಸಲೇಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ದೇಹಕ್ಕೆ ಕಬ್ಬಿದ ಅಂಶವನ್ನು ಒದಗಿಸುವಲ್ಲಿ ಅಡಚಣೆ ಉಂಟುಮಾಡುತ್ತದೆ.

ಕೋಲ್ಡ್/ಫ್ರೋಜನ್​​ ಫುಡ್ಸ್

ಚಹಾ-ಕಾಫಿ ಕುಡಿದ ಕೆಲವೇ ಕ್ಷಣಗಳ ಬಳಿಕ ಐಸ್ ಕ್ರೀಮ್ ಅಥವಾ ಕೋಲ್ಡ್ ಪದಾರ್ಥಗಳನ್ನು ತಿನ್ನಬೇಡಿ. ಬೇರೆ ಬೇರೆ ತಾಪಮಾನ ಹೊಂದಿರುವ ಆಹಾರಗಳನ್ನು ತಿನ್ನುವುದು ಅಜೀರ್ಣಕ್ಕೆ ಕಾರಣವಾಗಬಹುದು. ನಿಮಗೆ ಹಾಗೂ ತಿನ್ನಲೇ ಬೇಕಂತ ಅನಿಸಿದರೆ, ಬಿಸಿ ಚಹಾ ಕುಡಿದ 30ರಿಂದ 45 ನಿಮಿಷಗಳ ಬಳಿಕ ಇಂತಹ ಕೋಲ್ಡ್​ ಐಟಂಗಳನ್ನು ಸವಿಯುವುದು ಉತ್ತಮ.

ಅಧಿಕ ಪ್ರೋಟಿನ್​ಯುಕ್ತ ಆಹಾರಗಳು

ಸ್ನಾಯುಗಳ ದುರಸ್ತಿ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರೋಟೀನ್‌ಗಳು ಅತ್ಯಗತ್ಯ. ಆದರೆ, ಪ್ರೋಟೀನ್ ಭರಿತ ಆಹಾರಗಳೊಂದಿಗೆ ಟೀ ಸೇವಿಸುವುದರಿಂದ ಚಹಾದ ಪ್ರಯೋಜನಕಾರಿ ಉತ್ಕರ್ಷಣ ನಿರೋಧಕಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ಒಂದೊಳ್ಳೆ ಚಹಾ ಅನುಭವಕ್ಕೆ, ಪ್ರೋಟೀನ್-ಭರಿತ ಆಹಾರಗಳ ಜತೆಗೆ ಇಂತಹ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಸದಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net