ಪ್ರತಿದಿನ 10 ಒಣದ್ರಾಕ್ಷಿ ಸೇವಿಸಿ: ಅರ್ಧದಷ್ಟು ಭಾರತೀಯರ ಮಲಬದ್ಧತೆ ಸಮಸ್ಯೆಗೆ ಇದುವೇ ಮದ್ದು! | Raisins

Raisins
Raisins
Published on
ನವದೆಹಲಿ: ಭಾರತೀಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಮಲಬದ್ಧತೆ (Constipation), ಹೊಟ್ಟೆ ಉಬ್ಬರ (Bloating) ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ದುಬಾರಿ ಔಷಧಗಳಿಗಿಂತ ನಿಮ್ಮ ಅಡುಗೆ ಮನೆಯಲ್ಲಿರುವ 'ಒಣದ್ರಾಕ್ಷಿ' (Raisins) ಅತ್ಯುತ್ತಮ ಪರಿಹಾರ ಎಂದು ಫೋರ್ಟಿಸ್ ಆಸ್ಪತ್ರೆಯ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಪ್ರಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ (ಜೀರ್ಣಾಂಗವ್ಯೂಹದ ತಜ್ಞರು) ಡಾ. ಶುಭಂ ವತ್ಸ್ಯ ಅವರು ಇತ್ತೀಚೆಗೆ ಭಾರತೀಯರ ಆರೋಗ್ಯ ಸುಧಾರಣೆಗೆ ಸಂಬಂಧಿಸಿದಂತೆ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಸಲಹೆಯೊಂದನ್ನು ನೀಡಿದ್ದಾರೆ. ಅದರ ವರದಿ ಇಲ್ಲಿದೆ..

ಡಾಕ್ಟರ್ ಸಲಹೆ ಏನು?

ಡಾ. ಶುಭಂ ವತ್ಸ್ಯ ಅವರ ಪ್ರಕಾರ, ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು ಎದುರಿಸುತ್ತಿರುವ ಮಲಬದ್ಧತೆ ಸಮಸ್ಯೆಯನ್ನು ಕೇವಲ 10 ಒಣದ್ರಾಕ್ಷಿಗಳ ಮೂಲಕ ಗುಣಪಡಿಸಬಹುದು. "ಮಲಬದ್ಧತೆಗೆ ಯಾವಾಗಲೂ ಔಷಧಗಳ ಅಗತ್ಯವಿರುವುದಿಲ್ಲ. ಒಣದ್ರಾಕ್ಷಿಗಳು ನೈಸರ್ಗಿಕವಾಗಿ ಮಲವನ್ನು ಮೃದುಗೊಳಿಸುವ (Natural Stool Softener) ಗುಣ ಹೊಂದಿದ್ದು, ಜೀರ್ಣಾಂಗವ್ಯೂಹದಲ್ಲಿ ನೀರಿನ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ," ಎಂದು ಅವರು ತಿಳಿಸಿದ್ದಾರೆ.

ಹೇಗೆ ಸೇವಿಸಬೇಕು?

ಪ್ರತಿದಿನ 8 ರಿಂದ 10 ಒಣದ್ರಾಕ್ಷಿಗಳನ್ನು ರಾತ್ರಿ ಇಡೀ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಕೇವಲ ಒಂದು ವಾರ ಈ ಅಭ್ಯಾಸ ರೂಢಿಸಿಕೊಂಡರೆ ಜೀರ್ಣಕ್ರಿಯೆಯಲ್ಲಿ ಗಣನೀಯ ಬದಲಾವಣೆ ಕಾಣಬಹುದು.
ಜೀರ್ಣಕ್ರಿಯೆ ಸುಧಾರಣೆ: ಒಣದ್ರಾಕ್ಷಿಯಲ್ಲಿರುವ ನಾರಿನಂಶ (Fiber) ಮತ್ತು 'ಸೋರ್ಬಿಟೋಲ್' ಎಂಬ ಅಂಶವು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ಇದು ಪೈಲ್ಸ್ ಮತ್ತು ಫಿಶರ್‌ನಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯ: ಇದರಲ್ಲಿರುವ ಹೇರಳವಾದ ಪೊಟ್ಯಾಸಿಯಮ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿ.
ಅಸಿಡಿಟಿ ಮತ್ತು ಉಬ್ಬರಕ್ಕೆ ಮುಕ್ತಿ: ಕರುಳಿನ ಬ್ಯಾಕ್ಟೀರಿಯಾಗಳಿಗೆ ಪೋಷಣೆ ನೀಡುವ ಮೂಲಕ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಅಸಿಡಿಟಿ ಉಂಟಾಗುವುದನ್ನು ಇದು ತಡೆಯುತ್ತದೆ.
ರಕ್ತಹೀನತೆ ತಡೆ: ಕಬ್ಬಿಣದಂಶ ಸಮೃದ್ಧವಾಗಿರುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ತಜ್ಞರ ಎಚ್ಚರಿಕೆ
ಒಣದ್ರಾಕ್ಷಿ ನೈಸರ್ಗಿಕ ಪದಾರ್ಥವಾದರೂ, ಮಧುಮೇಹ (Diabetes) ಇರುವವರು ಅಥವಾ ತೀವ್ರತರವಾದ ಕರುಳಿನ ಸಮಸ್ಯೆ ಇರುವವರು ಇದನ್ನು ತಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳುವ ಮುನ್ನ ಒಮ್ಮೆ ವೈದ್ಯರ ಸಲಹೆ ಪಡೆಯುವುದು ಉತ್ತಮ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net