_1774893769994.webp?w=480&auto=format%2Ccompress&fit=max)
_1774893769994.webp?w=480&auto=format%2Ccompress&fit=max)
ಬೆಂಗಳೂರು: ಮನುಷ್ಯನ ಎಲ್ಲ ಕೆಲಸಗಳು ಇತ್ತೀಚೆಗೆ ಡಿಜಿಟಲ್ ಪರದೆಯನ್ನು ಅವಲಂಬಿಸಿದೆ. ದಿನದ ಬಹುಪಾಲು ಸಮುಯವನ್ನು ಡಿಜಿಟಲ್ ಪರದೆಯ ವೀಕ್ಷಣೆಯಲ್ಲೇ ಕಳೆಯುತ್ತಿದ್ದಾನೆ. ಕೆಲಸದ ಕಾರಣಕ್ಕೆ ಕಂಪ್ಯೂಟರ್ ವೀಕ್ಷಣೆಯ ಜೊತೆಗೆ ಮೊಬೈಲ್ ಬಳಕೆಯ ಸಮಯ ಮಿತಿಮೀರುತ್ತಿರುವುದರಿಂದ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (ಸಿವಿಎಸ್) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂಬ ಆತಂಕಕಾರಿ ಅಂಶವನ್ನು ತಜ್ಞವೈದ್ಯರು ಹಂಚಿಕೊಂಡಿದ್ದಾರೆ.
ದೀರ್ಘ ಸಮಯ ಪರದೆ ಮುಂದೆ ಕಳೆಯುವವರಲ್ಲಿ ಕಣ್ಣಿನ ಉರಿಯೂತ, ಕೆಂಪಾಗುವುದು, ನೀರು ಬರುವುದು, ಡ್ರೖೆನೆಸ್ (ಒಣತನ), ತಲೆನೋವು ಹಾಗೂ ದೃಷ್ಟಿ ಮಂಜಾಗುವುದು ಸೇರಿ ವಿವಿಧ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸುತ್ತಿವೆ. ಸಂಶೋಧನೆಗಳ ಪ್ರಕಾರ, ಶೇ.66 ರಿಂದ 70 ಜನರು ಸಿವಿಎಸ್ ಸಮಸ್ಯೆ ಎದುರಿಸುತ್ತಿದ್ದಾರೆ. ದಿನಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಡಿಜಿಟಲ್ ಪರದೆ ನೋಡುವವರಲ್ಲಿ ಶೇ.90 ಜನರಲ್ಲಿ ಲಕ್ಷಣಗಳು ಸಾಮಾನ್ಯವಾಗಿದ್ದು, ಕೂಡಲೇ ಎಚ್ಚರ ವಹಿಸದಿದ್ದರೆ ಮುಂದೆ ಬಹುದೊಡ್ಡ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಒಂದು ಕಾಲಕ್ಕೆ ಕಣ್ಣುಗಳ ಸಮಸ್ಯೆ ವಯಸ್ಸಾದ ಮೇಲೆ ಕಂಡುಬರುತ್ತಿದ್ದವು. ಆದರೆ ಸಿವಿಎಸ್ ಸಮಸ್ಯೆಗೆ ವಯೋಭೇದವಿಲ್ಲ. ಯಾರು ಅತಿಯಾಗಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಮತ್ತಿತರ ಡಿಜಿಟಲ್ ಪರದೆಗಳನ್ನು ಬಳಸುತ್ತಾರೆಯೋ ಅಂತಹವರಲ್ಲಿ ಈ ಸಮಸ್ಯೆ ಸಾಮಾನ್ಯ. ಆ ಹಿನ್ನೆಲೆಯಲ್ಲಿ ಯುವ ಜನತೆ ಮತ್ತು ಮಕ್ಕಳಲ್ಲೂ ಸಿವಿಎಸ್ ಲಕ್ಷಣ ಕಂಡುಬರುತ್ತಿದೆ.
ಸಿವಿಎಸ್ ಸಮಸ್ಯೆಯು ಕೇವಲ ಕಣ್ಣಿಗೆ ಸಂಬಂಧಿಸಿರುವುದಿಲ್ಲ. ಅತಿಯಾದ ಡಿಜಿಟಲ್ ಬಳಕೆಯಿಂದ ಕುತ್ತಿಗೆ ನೋವು, ಬೆನ್ನುನೋವು ಹಾಗೂ ನಿದ್ರಾಹೀನತೆ ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು. ಮನುಷ್ಯನ ಆರೋಗ್ಯಕ್ಕೆ ಆಹಾರ ಮತ್ತು ನಿದ್ರೆ ಬಹಳ ಪ್ರಮುಖವಾಗಿರುವುದರಿಂದ ನಿದ್ರಾಹೀನತೆ ಇನ್ನಿತರೆ ಹಲವು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಆತಂಕವಿರುತ್ತದೆ. ಆದ್ದರಿಂದ ಡಿಜಿಟಲ್ ಸಾಧನಗಳ ಬಳಕೆಯಲ್ಲಿ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದು ಮತ್ತು ಮಿತಿ ಪಾಲಿಸುವುದನ್ನು ರೂಢಿಸಿಕೊಳ್ಳದಿದ್ದರೆ ಮುಂದೆ ದೊಡ್ಡ ನಷ್ಟವನ್ನು ತೆರಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕಂಪ್ಯೂಟರ್ನಲ್ಲಿ ದಿನಪೂರ್ತಿ ಕೆಲಸ ಮಾಡುವ ಐಟಿ-ಬಿಟಿಯವರಲ್ಲಿ ಸಿವಿಎಸ್ ಸಾಮಾನ್ಯ. ಇದರಿಂದ ಸ್ಟ್ರೆಸ್ ಆಗುತ್ತದೆ. ಇದಕ್ಕೆ ಸರಳ ಪರಿಹಾರವೆಂದರೆ ಪ್ರತಿ 10 ರಿಂದ 20 ನಿಮಿಷಕ್ಕೊಮ್ಮೆ ಚಿಕ್ಕ ಬ್ರೇಕ್ ಕೊಟ್ಟು, ದೂರದ ದೃಶ್ಯವನ್ನು ನೋಡಬೇಕು.
ಮನುಷ್ಯನ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗ ಕಣ್ಣು. ಎಚ್ಚರವಿದ್ದಾಗಲೂ ಕಣ್ಣುಗಳು ಮಿಟುಕಿಸುವ ಮೂಲಕ ವಿಶ್ರಾಂತಿ ಪಡೆಯುತ್ತವೆ. ಆದರೆ ಡಿಜಿಟಲ್ ಪರದೆಗಳನ್ನು ಅತಿಯಾಗಿ ನೋಡುವ, ಗೇಮ್ಳನ್ನು ಆಡುವ ಹವ್ಯಾಸ ಇರುವವರು ದೀರ್ಘಕಾಲ ಕಣ್ಣು ಮಿಟುಕಿಸದೆ ನೋಡುತ್ತಾರೆ. ಇದು ಕಣ್ಣುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಕಣ್ಣುಗಳಿಗೆ ವಿಶ್ರಾಂತಿ ನೀಡುವ ಮೂಲಕ ಸಿವಿಎಸ್ ಸಮಸ್ಯೆಯಿಂದ ಹೊರಬರಲು ಸಾಧ್ಯ. ಸಾಮಾನ್ಯವಾಗಿ ದೂರದ ವಸ್ತುಗಳನ್ನು ನೋಡುವಾಗ ಕಣ್ಣುಗಳಿಗೆ ವಿಶ್ರಾಂತಿ ಸಿಗುತ್ತದೆ. ಆದರೆ ಟಿವಿ, ಕಂಪ್ಯೂಟರ್, ಮೊಬೈಲ್ ಬಳಸುವವರು ಹತ್ತಿರದ ನೋಟವನ್ನು ಹೆಚ್ಚು ಕಾಲ ನೋಡುವುದರಿಂದ ಕಣ್ಣಿನ ಸ್ನಾಯುಗಳು ಒತ್ತಡಕ್ಕೆ ಒಳಗಾಗಿ ಬೇಗ ದಣಿಯುತ್ತವೆ.
ಇದನ್ನು ತಪ್ಪಿಸಲು ಕಣ್ಣಿಗೆ ವಿಶ್ರಾಂತಿ ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ. ಸಿವಿಎಸ್ ತಡೆಗಟ್ಟಲು ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡ್ಗಳ ಕಾಲ 20 ಅಡಿ ದೂರದ ವಸ್ತುವನ್ನು ನೋಡುವುದು ಕಣ್ಣಿಗೆ ವಿಶ್ರಾಂತಿ ನೀಡುತ್ತದೆ. ಕಂಪ್ಯೂಟರ್ ಪರದೆ ಕಣ್ಣಿನ ಮಟ್ಟಕ್ಕಿಂತ 45 ಸೆಂ.ಮೀ ಕೆಳಗೆ ಇರಿಸುವುದು, ಕಣ್ಣುಗಳನ್ನು ಆಗಾಗ ಮಿಟುಕಿಸುವುದು ಹಾಗೂ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಲ್ಯೂಬ್ರಿಕೇ ಟಿಂಗ್ ಕಣ್ಣಿನ ಹನಿ ಅಥವಾ ಆಂಟಿಗ್ಲೇರ್ ಕನ್ನಡಕಗಳನ್ನು ಬಳಸುವುದು ಉತ್ತಮ.