ವರದಿಗಳ ಪ್ರಕಾರ, ಗೋರಖ್‌ಪುರದ 170ಕ್ಕೂ ಹೆಚ್ಚು ಗ್ರಾಮಸ್ಥರು ರೇಬೀಸ್ ಪೋಸ್ಟ್-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್ (PEP) ಲಸಿಕೆಯ ಮೊದಲ ಡೋಸ್ ಅನ್ನು ತೆಗೆದುಕೊಂಡಿದ್ದಾರೆ. ಇಷ್ಟೊಂದು ತಳಮಳಕ್ಕೆ ಇನ್ನೊಂದು ಕಾರಣವಿದೆ. ಅದೇನೆಂದರೆ, ಕಳೆದ ಮಾರ್ಚ್ ತಿಂಗಳಲ್ಲಿ ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬರು ರೇಬೀಸ್ ಸೋಂಕಿತ ಹಸುವಿನ ಹಾಲು ಕುಡಿದು ಮೃತಪಟ್ಟರು ಎಂಬ ಸುದ್ದಿ ಹರಿದಾಡಿತು. ಆದಾಗ್ಯೂ, ಆ ಮಹಿಳೆ ರೇಬೀಸ್ ಹಸುವಿನ ಹಾಲು ಕುಡಿದು ಸಾವಿಗೀಡಾಗಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆ ಮಹಿಳೆ ಸೇವಿಸಿದ ಹಾಲು ಪಾಶ್ಚರೀಕರಿಸಲ್ಪಟ್ಟಿದೆಯೇ? ಅಥವಾ ಕಚ್ಛಾ ಹಾಲೇ? ಎಂಬುದನ್ನು ವರದಿಗಳು ಸ್ಪಷ್ಟಪಡಿಸಿಲ್ಲ. ಮಹಿಳೆಗೆ ಹಾಲಿನಿಂದಲೇ ರೇಬೀಸ್ ವೈರಸ್ ಬಂದಿದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಅಧಿಕೃತ ದೃಢೀಕರಣ ಅಥವಾ ವೈದ್ಯಕೀಯ ಸಾಕ್ಷ್ಯವಿರಲಿಲ್ಲ. ಆದರೆ, ಸ್ಥಳೀಯವಾಗಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು ಮತ್ತು ಜನರಲ್ಲಿ ಭಾರೀ ಆತಂಕ ಮೂಡಿತು.