ಹಲವಾರು ಆರೋಗ್ಯ ತೊಂದರೆಗಳಿಗೆ ದಿವ್ಯೌಷಧ ಈ ಶತಾವರಿ

ಶತಾವರಿ
ಶತಾವರಿ
Published on

ಗರ್ಭಿಣಿಯರು ಸೇವಿಸಿದಾಗ ಅವರ ದೇಹಕ್ಕೆ ಮತ್ತು ಭ್ರೂಣಕ್ಕೆ ಶಕ್ತಿಯನ್ನು ತುಂಬಿದರೆ; ಹೆರಿಗೆಯಾದ ನಂತರ ಎದೆಹಾಲು ಹೆಚ್ಚಿಸಲು ತುಂಬಾ ಸಹಕಾರಿ. ಅಷ್ಟೇ ಅಲ್ಲದೆ ಮುಟ್ಟು ನಿಲ್ಲುವ ಸಮಯದಲ್ಲಿ ಹಾರ್ವೇನ್​ಗಳ ಏರುಪೇರಿನ ಕಾರಣದಿಂದ ಉಂಟಾಗುವ ಎಲ್ಲ ರೀತಿಯ ಸಮಸ್ಯೆಗಳಲ್ಲಿ ಕೂಡ ಇದು ಅನುಕೂಲಕರ. ಇದನ್ನು ವೃಶ್ಯ ಎಂದು ಕರೆದಿದ್ದಾರೆ. ಅಂದರೆ ಇದು ಸ್ತ್ರೀ, ಪುರುಷರಿಬ್ಬರಲ್ಲಿಯೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಟ್ಟಿನ ಸಮಯದ ಅತಿಯಾದ ರಕ್ತಸ್ರಾವ, ಸುಸ್ತು, ಮಾನಸಿಕ ದೌರ್ಬಲ್ಯಗಳನ್ನು ಕೂಡ ಇದು ನಿವಾರಿಸುತ್ತದೆ. 

ಒಟ್ಟಿನಲ್ಲಿ ಸ್ತ್ರೀ ಪುರುಷರಿಬ್ಬರಲ್ಲಿಯೂ ಹಾರ್ವೇನಿನ ವ್ಯತ್ಯಾಸದಿಂದ ಉಂಟಾಗುವ ತೊಂದರೆಗಳಲ್ಲಿ ಇದು ಅನುಕೂಲಕರ. ಟಿಬಿ, ನ್ಯುಮೋನಿಯಾ, ಜ್ವರ ಮುಂತಾದ ಹಲವು ರೋಗಗಳ ಕಾರಣದಿಂದ ದೇಹಕ್ಕೆ ಉಂಟಾದ ದೌರ್ಬಲ್ಯವನ್ನು ಕಡಿಮೆ ಮಾಡಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಕೂಡ ಸಹಕಾರಿ. ಇದಕ್ಕೆ ಚಕ್ಷುಷ್ಯ ಎಂದು ಕರೆದಿದ್ದಾರೆ. ಅಂದರೆ ಇದು ಕಣ್ಣಿನ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ದೇಹಕ್ಕೆ ತಂಪು ನೀಡಿ, ಉಷ್ಣತೆಯನ್ನು ಕಡಿಮೆ ಮಾಡಿ, ಪಿತ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಬೇರೆ ಬೇರೆ ಭಾಗಗಳಲ್ಲಿ ಉಂಟಾಗುವ ರಕ್ತಸ್ರಾವವನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ. 

ಅಂದರೆ ಮೂಗಿನಲ್ಲಿ, ಮೂಲವ್ಯಾಧಿಯಿಂದ, ಮುಟ್ಟಿನ ಸಮಯದ ರಕ್ತಸ್ರಾದಲ್ಲಿ ತುಂಬಾ ಅನುಕೂಲಕರ. ಪುರುಷರಲ್ಲಿ ಕೇವಲ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲ; ಇದು ವೀರ್ಯಾಣುವಿನ ಗುಣಮಟ್ಟವನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ಜತೆಗೆ ಸ್ತ್ರೀಯರಲ್ಲಿ ಅಂಡಾಣುವಿನ ಗುಣಮಟ್ಟವನ್ನು ಕೂಡಾ ಹೆಚ್ಚಿಸುತ್ತದೆ. ತನ್ಮೂಲಕ ಸಂತಾನಹೀನತೆಯಲ್ಲಿ ಕೂಡ ಒಳ್ಳೆಯ ಪಾತ್ರವನ್ನು ನಿರ್ವಹಿಸುತ್ತದೆ. ಹಾಗಾಗಿಯೇ ಇದಕ್ಕೆ ಗರ್ಭಪ್ರದ ಎಂದು ಕರೆದಿದ್ದಾರೆ. ಇದಕ್ಕೆ ವಾತ, ಪಿತ್ತ, ಕಫ ಈ ಮೂರೂ ದೋಷಗಳನ್ನು ನಿಯಂತ್ರಿಸುವ ಶಕ್ತಿ ಇದೆ. ಮೂಲವ್ಯಾಧಿಯಲ್ಲಿ, ಆಮಶಂಕೆಯಲ್ಲಿ, ಅಸಿಡಿಟಿಯ ಸಮಸ್ಯೆಗಳಲ್ಲಿ ಕೂಡ ಇದು ಅನುಕೂಲಕರ.

ಪಿತ್ತ ಪ್ರಕೃತಿಯವರು ಮತ್ತು ದೌರ್ಬಲ್ಯದಿಂದ ಬಳಲುತ್ತಿರುವವರು ಸ್ವಲ್ಪ ಪ್ರಮಾಣದಲ್ಲಿ ಖಾರ ಅಥವಾ ಹುಳಿ ಇರುವ ಪದಾರ್ಥಗಳನ್ನು ಸೇವಿಸಿದರೂ ಅಸಿಡಿಟಿ ಹೆಚ್ಚಾಗಿ ತೊಂದರೆಯನ್ನು ಅನುಭವಿಸುತ್ತಾರೆ. ಅಂಥವರು ಪ್ರತಿನಿತ್ಯ ಒಂದು ಚಮಚದಷ್ಟು ಶತಾವರಿ ಚೂರ್ಣವನ್ನು ಒಂದು ಲೋಟ ಹಾಲಿಗೆ ಹಾಕಿ ದಿನಕ್ಕೊಮ್ಮೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಅಸಿಡಿಟಿ ಕಡಿಮೆಯಾಗುವುದಷ್ಟೇ ಅಲ್ಲದೆ ದೇಹಕ್ಕೆ ಒಳ್ಳೆಯ ಶಕ್ತಿ ಕೂಡ ಬರುತ್ತದೆ. ನಿದ್ರಾಹೀನತೆ ಇರುವವರು ಅಶ್ವಗಂಧ ಮತ್ತು ಶತಾವರಿ ಚೂರ್ಣಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಈ ಮಿಶ್ರಣವನ್ನು ಒಂದು ಚಮಚದಷ್ಟು ತೆಗೆದುಕೊಂಡು ಹಾಲಿಗೆ ಹಾಕಿ ರಾತ್ರಿ ಸೇವಿಸಿದರೆ ನಿತ್ಯವೂ ಚೆನ್ನಾಗಿ ಬರುತ್ತದೆ. 

ಈ ಎರಡೂ ದ್ರವ್ಯಗಳು ಶಕ್ತಿಯ ವೃದ್ಧಿಯನ್ನು ಉಂಟುಮಾಡುವಂಥವಾಗಿರುವುದರಿಂದ ನವ ಯೌವ್ವನ ಬರಲು ಸಾಧ್ಯವಾಗುತ್ತದೆ. ಸೋಡಲ ನಿಘಂಟುವಿನಲ್ಲಿ ಇದಕ್ಕೆ ಖಾಲಿತ್ಯನಾಶಿನಿ ಎಂದು ಕರೆದಿದ್ದಾರೆ. ಅಂದರೆ ಇದು ಕೂದಲು ಉದುರಿ ತಲೆಬೋಳಾಗುವುದನ್ನು ತಪ್ಪಿಸುತ್ತದೆ ಎಂದರ್ಥ. ಚಳಿಗಾಲ ಕಳೆದು ಬೇಸಿಗೆ ಬರುವ ಸಮಯದಲ್ಲಿ ಬಹಳ ಜನರಿಗೆ ಉಷ್ಣತೆ ಮತ್ತು ಸುಸ್ತು ಕಾಡುತ್ತವೆ. ಆಗಲೇ ಹೇಳಿದಂತೆ ಇದು ಇವೆರಡನ್ನೂ ಕಡಿಮೆ ಮಾಡುವಂತಹ ದಿವ್ಯೌಷಧ. ಹಾಗಾಗಿ ಈ ಕಾಲಕ್ಕೆ ಇದರ ಸೇವನೆ ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net