

ನಮ್ಮ ಇಡೀ ದೇಹದ ಭಾರವನ್ನು ನಿತ್ಯ ಹೊರುವ ಪಾದಗಳ ಬಗ್ಗೆ ನಾವು ಸಾಮಾನ್ಯವಾಗಿ ಹೆಚ್ಚು ಗಮನ ಕೊಡುವುದಿಲ್ಲ. ಆದರೆ, ನಿಮ್ಮ ಪಾದದ ಕೆಳಗೆ ಒಂದು ಚಿಕ್ಕ ಟೆನ್ನಿಸ್ ಬಾಲ್ ಅನ್ನು ಇಟ್ಟು ಉರುಳಿಸುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯದ ಅನುಭವವೇ ಬದಲಾಗಬಲ್ಲದು! ಈ ಸರಳ ತಂತ್ರಕ್ಕೆ ಯೋಗಪಾದ ಬಂಧ ಎನ್ನುತ್ತಾರೆ. ಏಕೆಂದರೆ ಇದು ಕೇವಲ ನೋವು ನಿವಾರಣೆ ಅಲ್ಲ.
ದೇಹಭಂಗಿ, ಏಕಾಗ್ರತೆ ಮತ್ತು ಒತ್ತಡದ ಮಟ್ಟವನ್ನು ಸುಧಾರಿಸುವ ಒಂದು ಯೋಗಾಭ್ಯಾಸದಂತಿದೆ. ಯಾವುದೇ ದುಬಾರಿ ಉಪಕರಣಗಳು ಇಲ್ಲದೆ, ದಿನಕ್ಕೆ ಕೆಲವೇ ನಿಮಿಷಗಳನ್ನು ಮೀಸಲಿಡುವ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸುವ ಈ ಸರಳ ವಿಜ್ಞಾನವನ್ನು ತಿಳಿದುಕೊಳ್ಳೋಣ. ಚೆಂಡು ಉರುಳಿಸುವಿಕೆಯು ಇಡೀ ದೇಹಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸಲು ಎರಡು ಮುಖ್ಯ ಕಾರಣಗಳಿವೆ.
1. ನರಮಂಡಲಕ್ಕೆ ನೇರ ಸಂಪರ್ಕ: ಪಾದದ ಕೆಳಭಾಗವು 7,000ಕ್ಕೂ ಹೆಚ್ಚು ಸಂವೇದನಾ ನರ ತುದಿಗಳಿಂದ ತುಂಬಿದೆ. ಚೆಂಡಿನ ಮೂಲಕ ಈ ನರಗಳನ್ನು ಉತ್ತೇಜಿಸಿದಾಗ, ಅವು ಶಕ್ತಿಯುತ ಸಂಕೇತಗಳನ್ನು ನೇರವಾಗಿ ನಮ್ಮ ಮಿದುಳು ಮತ್ತು ಬೆನ್ನುಹುರಿಗೆ ರವಾನಿಸುತ್ತವೆ. ಇದು ನಮ್ಮ ದೇಹದ ಪ್ಯಾರಾಸಿಂಪಥೆಟಿಕ್ ನರಮಂಡಲ (ವಿಶ್ರಾಂತಿ ಮತ್ತು ಚೇತರಿಕೆ ನೀಡುವ ವ್ಯವಸ್ಥೆ) ಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ಒತ್ತಡದ ಹಾಮೋನ್ (ಕಾರ್ಟಿಸೋಲ್) ಮಟ್ಟ ಇಳಿದು, ರಕ್ತದೊತ್ತಡ ಮತ್ತು ನಾಡಿಮಿಡಿತ ಸಮತೋಲನಕ್ಕೆ ಬರುತ್ತದೆ. ಇದು ಸಮತೋಲನದ ನಮ್ಮ ದೇಹದ ಚಲನೆ ಮತ್ತು ಸ್ಥಾನದ ಕುರಿತು ಮಿದುಳಿಗೆ ಸರಿಯಾದ ಮಾಹಿತಿ ತಲುಪಲು ಸಹಾಯ ಮಾಡುತ್ತದೆ.
2. ದೇಹದ ಫ್ಯಾಸಿಯಾ ಹೆದ್ದಾರಿ ಬಿಡುಗಡೆ: ನಮ್ಮ ಪಾದದ ಹಿಮ್ಮಡಿಯಿಂದ ಕಾಲ್ಬೆರಳುಗಳವರೆಗೆ ಹಬ್ಬಿರುವ ಗಟ್ಟಿಯಾದ ಅಂಗಾಂಶಕ್ಕೆ ಪ್ಲಾಂಟಾರ್ ಫ್ಯಾಸಿಯಾ ಎನ್ನುತ್ತಾರೆ. ಈ ಅಂಗಾಂಶವು ಸೊಂಟ, ಬೆನ್ನುಮೂಳೆ ಮತ್ತು ಕುತ್ತಿಗೆಯವರೆಗಿನ ಸ್ನಾಯುಗಳೊಂದಿಗೆ ಸಂಪರ್ಕ ಹೊಂದಿದೆ. ಇದು ಇಡೀ ದೇಹದ ‘ಫ್ಯಾಸಿಯಾ ಹೆದ್ದಾರಿ’ಯನ್ನು ರೂಪಿಸುತ್ತದೆ. ಪಾದದ ಫ್ಯಾಸಿಯಾ ಬಿಗಿಯಾಗಿದ್ದರೆ, ಅದು ನಿಮ್ಮ ನಡೆಯುವ ಶೈಲಿಯನ್ನು ಹಾಳು ಮಾಡಿ, ಮೊಣಕಾಲು, ಸೊಂಟ ಮತ್ತು ಬೆನ್ನಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಚೆಂಡು ಉರುಳಿಸುವುದರಿಂದ ಈ ಬಿಗಿತ ನಿವಾರಣೆಯಾಗಿ, ಕೇವಲ ಪಾದದ ನೋವು ಮಾತ್ರವಲ್ಲದೆ ದೇಹದ ಮೇಲ್ಭಾಗದ ಕೀಲು ನೋವು ಕೂಡ ಕಡಿಮೆಯಾಗುತ್ತದೆ.
ಯೋಗಪಾದ ಬಂಧದ ನಿಯಮಿತ ಅಭ್ಯಾಸದಿಂದ ಪ್ಲಾಂಟಾರ್ ಫ್ಯಾಸಿಟಿಸ್, ಮೊಣಕಾಲು, ಸೊಂಟ ಮತ್ತು ಕುತ್ತಿಗೆಯ ಬಿಗಿತ ಕಡಿಮೆಯಾಗುತ್ತದೆ. ಪಾದದ ಸಮಸ್ಯೆ ಸುಧಾರಿಸುತ್ತದೆ ಮತ್ತು ಕಾಲಿನಲ್ಲಿನ ಊತ ಕಡಿಮೆಯಾಗುತ್ತದೆ. ರಕ್ತ ಮತ್ತು ದುಗ್ಧರಸದ ಹರಿವು ಹೆಚ್ಚಾಗಿ, ಪಾದಗಳಲ್ಲಿ ಭಾರವಾದ ಭಾವನೆ ಕಡಿಮೆಯಾಗುತ್ತದೆ. ನರಮಂಡಲ ಶಾಂತವಾಗುವುದರಿಂದ ಆತಂಕ ಕಡಿಮೆಯಾಗುತ್ತದೆ ಮತ್ತು ರಾತ್ರಿ ಉತ್ತಮ ನಿದ್ರೆ ಬರುತ್ತದೆ. ಹೀಗೆ ಯಾವುದೇ ದುಬಾರಿ ಉಪಕರಣಗಳ ಅಗತ್ಯವಿಲ್ಲದ ಈ ಯೋಗಪಾದ ಬಂಧ ತಂತ್ರವು ಇಡೀ ದೇಹಕ್ಕೆ ಚೈತನ್ಯ ನೀಡುವ ಸರಳ ವಿಧಾನ.