ಇದು ಋತುಸಂಧಿ ಕಾಲ...ಆರೋಗ್ಯದ ಬಗ್ಗೆ ಇರಲಿ ಎಚ್ಚರ

Rain june 5 2020
Published on
ಒಂದು ಋತುವಿನಿಂದ ಇನ್ನೊಂದು ಋತುವಿಗೆ ವಾತಾವರಣ ಬದಲಾಗುವಾಗ ದೇಹ ಅದಕ್ಕೆ ತಕ್ಷಣ ಹೊಂದಿಕೊಳ್ಳದ ಕಾರಣ ಆ ವೇಳೆ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಆಯುರ್ವೇದದಲ್ಲಿ ಹೀಗೆ ಎರಡು ಋತುಗಳ ನಡುವಿನ ಸಮಯಕ್ಕೆ ‘ಋತುಸಂಧಿ’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಬೇಸಿಗೆಯಲ್ಲಿ ಅನುಸರಿಸುತ್ತಿದ್ದ ನಿಯಮಗಳನ್ನು ನಿಧಾನಕ್ಕೆ ಬಿಟ್ಟು ಮಳೆಗಾಲದ ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ತಿಳಿಯೋಣ.

ಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿ ಬೇರೆ ಕಾಲಗಳಿಗಿಂತ ಕಡಿಮೆಯಾಗಿರುತ್ತದೆ. ಹಾಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಮಾತ್ರ ಸೇವಿಸಬೇಕು. ವಾತಾವರಣ ತಂಪಾಗಿದೆ ಎಂದು ಕರಿದ ಪದಾರ್ಥಗಳನ್ನು ಸೇವಿಸುವುದು ತಪ್ಪು. ತೆರೆದು ಬೇಯಿಸಿ ನೀರು ಬಸಿದ ಮೆತ್ತಗಿನ ಅನ್ನ ಮತ್ತು ಹೆಸರುಬೇಳೆಯ ತಿಳಿಸಾರನ್ನು ಹೆಚ್ಚಾಗಿ ಬಳಸಬೇಕು ಎನ್ನುತ್ತದೆ ಆಯುರ್ವೆದ. ಕೊತ್ತಂಬರಿ, ಜೀರಿಗೆ, ಶುಂಠಿ, ಲವಂಗ, ಚಕ್ಕೆ, ಅರಿಶಿಣ, ಕಲ್ಲು ಹೂ, ಕಾಳುಮೆಣಸು, ಸಾಸಿವೆ ಇಂತಹ ಎಲ್ಲ ಸಾಂಬಾರಪದಾರ್ಥಗಳನ್ನು ಹೆಚ್ಚು ಬಳಸಬೇಕಾದ ಕಾಲ ಇದು. ಇವುಗಳ ಕಷಾಯ ಮಾಡಿ ಅದಕ್ಕೆ ಜೋನಿಬೆಲ್ಲ ಹಾಕಿ ನಿತ್ಯ ಕುಡಿದರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಬಹುತೇಕ ಸಮಸ್ಯೆಗಳಿಂದ ದೂರ ಇರಬಹುದು. ವಿಶೇಷವಾಗಿ ಅಸ್ತಮಾ, ಆಮವಾತ, ಅಲರ್ಜಿ, ಅಜೀರ್ಣದ ಸಮಸ್ಯೆ ಇರುವವರಿಗೆ ಈ ಕಷಾಯ ತುಂಬ ಪ್ರಯೋಜನಕಾರಿಯಾಗುತ್ತದೆ. ಇಂತಹ ಸಮಸ್ಯೆ ಇರುವವರಂತೂ ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಜೀರ್ಣಕ್ಕೆ ಸುಲಭವಲ್ಲದ ಆಹಾರ ಮತ್ತು ಅತಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಾರದು. ಬೆಳ್ಳುಳ್ಳಿ, ಈರುಳ್ಳಿ, ಇಂಗು, ಕರಿಬೇವು, ಜೋನಿಬೆಲ್ಲ, ಬೆಣ್ಣೆಯನ್ನು ತೆಗೆದ ಮಜ್ಜಿಗೆ, ದೊಡ್ಡಪತ್ರೆ, ಪುದಿನ, ಮೇಲೆ ಹೇಳಿದ ಎಲ್ಲ ಸಾಂಬಾರ ಪದಾರ್ಥಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುವುದು ಒಳ್ಳೆಯದು.

ಇನ್ನು ಇಡೀ ಮಳೆಗಾಲದಲ್ಲಿ ವಿಶೇಷವಾಗಿ ಬಳಸಬೇಕಾದ ಇನ್ನೊಂದು ವಸ್ತು ಜೇನುತುಪ್ಪ. ಇದರ ಬಳಕೆಯಿಂದ ಜೀರ್ಣಶಕ್ತಿ ಹೆಚ್ಚಿ, ದೇಹದ ತಂಪು ಕಡಿಮೆಯಾಗಿ ಅನುಕೂಲವಾಗುತ್ತದೆ. ಹಲವಾರು ರೋಗಗಳನ್ನು ತಡೆಯಲೂ ಸಹಾಯವಾಗುತ್ತದೆ. ಮೇಲೆ ಹೇಳಿದ ಕಷಾಯ ತಣಿದ ನಂತರ ಅದಕ್ಕೆ 1-2 ಚಮಚ ಜೇನುತುಪ್ಪ ಹಾಕಿ ಕುಡಿಯಬಹುದು ಅಥವಾ ಸೂರ್ಯಾಸ್ತದ ಒಳಗೇ ತೆಳ್ಳಗಿನ ಹಾಲಿಗೆ ಹಾಕಿ ಕುಡಿಯಬಹುದು. ಸೂರ್ಯಾಸ್ತದ ನಂತರ ಹಾಲು, ಮೊಸರು, ತುಪ್ಪದ ಸೇವನೆ ಬೇಡ. ಜೇನುತುಪ್ಪವನ್ನು ಹಾಗೆಯೇ ಸೇವಿಸಬಹುದು.

ಮಳೆಗಾಲದಲ್ಲಿ ಸದಾ ಕುದಿಸಿ ಆರಿಸಿದ ನೀರನ್ನೇ ಸೇವಿಸಬೇಕು. ನೀರನ್ನು ಕುದಿಸುವಾಗ ಒಂದೆರಡು ತುಳಸಿ ಎಲೆ ಮತ್ತು ಅರಿಶಿಣವನ್ನು ಹಾಕಿದರೆ ಇನ್ನೂ ಒಳ್ಳೆಯದು. ಮಳೆಗಾಲ ಪ್ರಾರಂಭವಾಗಿ ಕೆಲವು ದಿನ ಕಳೆದ ನಂತರ ಮಳೆಯ ನೀರನ್ನು ಭೂಮಿಗೆ ತಾಗದಂತೆ ಸಂಗ್ರಹಿಸಿ ಆ ನೀರನ್ನು ಬಳಸಬೇಕು. ಅದಕ್ಕೆ ಅಮೃತಸಮಾನ ಗುಣವಿದ್ದು, ಆಯುರ್ವೆದದಲ್ಲಿ ಅದನ್ನು ‘ದಿವ್ಯಜಲ’ ಎಂದು ಕರೆಯಲಾಗಿದೆ. ಮಳೆಗಾಲದಲ್ಲಿ ಹಗಲಿನ ವೇಳೆ ನಿದ್ರಿಸಬಾರದು. ಬೆಳಗ್ಗೆ ಬೇಗ ಎದ್ದು ಯೋಗಾಸನ, ಪ್ರಾಣಾಯಾಮ ಮಾಡಲೇಬೇಕಾದ ಕಾಲ ಇದು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಮಳೆಗಾಲದಲ್ಲಿ ಉಲ್ಬಣವಾಗುವ ಮತ್ತು ಪ್ರಾರಂಭವಾಗುವ ಸಮಸ್ಯೆಗಳನ್ನು ದೂರವಿಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net