ಎಲ್ಲ ದಾನಕ್ಕಿಂತಲೂ ಆರೋಗ್ಯ ದಾನ ಶ್ರೇಷ್ಠ: ತಮ್ಮಯ್ಯ

26 ckm 1 (1)
ಚಿಕ್ಕಮಗಳೂರಿನ ಉರ್ದು ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ರಿಯಾಜ್ ಖಾನ್, ಡಾ.ಅಬ್ದುಲ್ ರೆಹಮಾನ್, ಎಂ.ಎಲ್.ಮೂರ್ತಿ, ಬಿ.ಅಮ್ಜದ್ ಇತರರಿದ್ದರು.
Published on

ಚಿಕ್ಕಮಗಳೂರು: ಅನ್ನದಾನ, ವಿದ್ಯಾದಾನ ಶ್ರೇಷ್ಠ ಎನ್ನುತ್ತಾರೆ. ಆದರೆ ಸರ್ಕಾರ ಅಥವಾ ಟ್ರಸ್ಟಗಳಿಂದ ಬಡವರಿಗಾಗಿ ನಡೆಸುವ ಉಚಿತ ಆರೋಗ್ಯ ಶಿಬಿರಗಳು ಎಲ್ಲಕ್ಕಿಂತ ಮಿಗಿಲು. ಯಾವುದೇ ಸರ್ಕಾರ ಇರಲಿ ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ಕೊಡಬೇಕು. ಆಗ ಬಡವರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಉರ್ದು ಶಾಲೆಯಲ್ಲಿ ನ್ಯಾಷನಲ್ ವೆಲ್‌ಫೇರ್ ಚಾರಿಟಬಲ್ ಟ್ರಸ್ಟ್, ಕಣಚೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದಲೇ ನಿರಂತರವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ದೊರೆತರೆ ಇನ್ಯಾವುದು ಅವರಿಗೆ ಉಚಿತ ಕೊಡುಗೆ ಬೇಡ. ಆರೋಗ್ಯ ಚೆನ್ನಾಗಿದ್ದರೆ ಸಂಪಾದನೆ, ಸಾಧನೆ ಮಾಡಲು ವಿಪುಲ ಅವಕಾಶಗಳಿವೆ ಎಂದರು.
ಯಾವುದೇ ಧರ್ಮದ ಜನರಿರಲಿ ಅವರು ದೇವರಲ್ಲಿ ಮೊದಲು ಬೇಡುವುದೆ ಆರೋಗ್ಯ ಚೆನ್ನಾಗಿರಲಿ ಎಂದು. ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ. ಮಧ್ಯಮ ಮತ್ತು ಬಡವರಿಗೆ ದೊಡ್ಡ ಕಾಯಿಲೆಗಳು ಬಾರದಿರಲಿ. ಬಂದರೆ ಅವರು ಎಲ್ಲ ಆಸ್ತಿ ಪಾಸ್ತಿ ಕಳೆದುಕೊಂಡು ನಿರ್ಗತಿಕರಾಗುತ್ತಾರೆ ಎಂದು ಹೇಳಿದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶಫಿವುಲ್ಲಾ ಮಾತನಾಡಿ, ಬಡಜನರಿಗೆ ಉಚಿತ ಚಿಕಿತ್ಸೆ , ಸೌಲಭ್ಯ ಸಿಗಬೇಕು ಎಂಬುದು ಟ್ರಸ್ಟ್ ಉದ್ದೇಶ. ಕಾಯಿಲೆ ಎನ್ನುವುದು ಬಡವ-ಬಲ್ಲಿದ ಎಂಬುದನ್ನು ನೋಡಿ ಬರುವುದಿಲ್ಲ. ಹೀಗಾಗಿ ಸರ್ಕಾರ ಎಲ್ಲರಿಗೂ ಸಮಾನ ಚಿಕಿತ್ಸೆ ಹಾಗೂ ಸೌಲಭ್ಯ ನೀಡಬೇಕು. ಕಣಚೂರು ಮೆಡಿಕಲ್ ಕಾಲೇಜು ಶೇ.90 ಸೌಲಭ್ಯ ನೀಡುವ ಮೂಲಕ ಇಂದು ಉಚಿತ ಚಿಕಿತ್ಸಾ ಶಿಬಿರ ನಡೆಸುತ್ತಿದೆ. ದಾನಶೂರ ಕರ್ಣನಾಗಿ ಡಾ. ಹಾಜಿ ಮೋಣು ಅವರ ಕುಟುಂಬ ಕಣಚೂರು ಮೆಡಿಕಲ್ ಕಾಲೇಜು ಸಂಸ್ಥೆಯಿಂದ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.
ಟ್ರಸ್ಟ್ ಅಧ್ಯಕ್ಷ ರಿಯಾಜ್ ಖಾನ್ ಮಾತನಾಡಿ, ಟ್ರಸ್ಟ್ ವತಿಯಿಂದ ಹೃದಯ, ಕ್ಯಾನ್ಸರ್ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ ಅನೇಕರನ್ನು ಕಣಚೂರು ಮೆಡಿಕಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೇವೆ. ನಮ್ಮ ಆರೋಗ್ಯ ತಪಾಸಣೆ ಶಿಬಿರ ವರ್ಷವಿಡೀ ಇರಲಿದೆ. ನ್ಯಾಷನಲ್ ಟ್ರಸ್ಟ್‌ನಿಂದ ಎರಡೂವರೆ ಸಾವಿರ ಆಪರೇಷನ್ ಮಾಡಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಕಣಚೂರು ಆಸ್ಪತ್ರೆಯ ಮುಖ್ಯಸ್ಥ ಡಾ.ಅಬ್ದುಲ್ ರೆಹಮಾನ್ ಮಾತನಾಡಿ, ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ರಾಜ್ಯಾದ್ಯಂತ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತಿದೆ. ಆಸಕ್ತರಿಗೆ ಉಚಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಸಿಪಿಐ ಮುಂಡ ಬಿ.ಅಮ್ಜದ್, ಸಿಡಿಎ ಮಾಜಿ ಅಧ್ಯಕ್ಷ ಅತೀಕ್ ಖೈಸರ್, ಪ್ರಮುಖರಾದ ಷಹಬುದ್ದೀನ್, ಸೈಯದ್ ಗೌಸ್ ಮೋಹಿದ್ದೀನ್ ಶಾ, ನಿರ್ದೇಶಕರಾದ ಅಕ್ಮಲ್, ಇಕ್ಬಾದ್ ಅಹಮದ್, ಅನ್ವರ್, ರಫೀಕ್ ಅಹಮದ್, ಅಸ್ಲಾಮ್, ಪರ್ವೀಜ್, ಜಿಯಾ, ಫೈರಜ್ ಅಹಮದ್ ಮತ್ತಿತರರಿದ್ದರು.

2 ವರ್ಷದಲ್ಲಿ ಆಸ್ಪತ್ರೆ ಪೂರ್ಣ
ನ್ಯಾಷನಲ್ ವೆಲ್‌ಫೇರ್ ಟ್ರಸ್ಟ್‌ನಿಂದ 9 ವರ್ಷಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ವರ್ಷದಿಂದ ಸರ್ಕಾರದಿಂದಲೇ ವರ್ಷಕ್ಕೊಮ್ಮೆ ಒಳ್ಳೊಳ್ಳೆ ವೈದ್ಯರನ್ನು ಕರೆಯಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತೇವೆ. ಚಿಕ್ಕಮಗಳೂರಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದೆ. ಅದನ್ನು 2 ವರ್ಷದಲ್ಲಿ ಪೂರ್ಣಗೊಳಿಸಿ ಜನರಿಗೆ ಅರ್ಪಣೆ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net