

ಮಂಗಳೂರು: ಕೋಟ್ಯಂತ ರೂಪಾಯಿ ಸೈಬರ್ ವಂಚನೆ ಮಾಡಿದ ಆರೋಪಿ ಜತೆ ತನಿಖೆಗೆ ಹೋಗಿದ್ದ ಸಂದರ್ಭ ಆತನೊಂದಿಗೆ ಸಲುಗೆಯಿಂದ ವರ್ತಿಸಿ ಸೆಲ್ಫಿ ತೆಗೆದಿದ್ದ ಉರ್ವ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬರ್ ಪೀಟರ್ ಡಿಸೋಜ ಎಂಬವರನ್ನು ಅಮಾನತುಗೊಳಿಸಿ ಆಯುಕ್ತ ಅನುಪಮ್ ಅಗರ್‌ವಾಲ್ ಆದೇಶ ಹೊರಡಿಸಿದ್ದಾರೆ.
ಆರೋಪಿ ರಾಜ್ ಕುಮಾರ್ ಜತೆ ಸಿಬ್ಬಂದಿ ಸೆಲ್ಫಿ ತೆಗೆದಿರುವುದು ಗಮನಕ್ಕೆ ಬಂದಿದ್ದರೂ, ಈ ಘಟನೆಯ ಬಗ್ಗೆ ನಿರ್ಲಕ್ಷೃ ವಹಿಸಿದ್ದ ಠಾಣಾ ಇನ್‌ಸ್ಪೆಕ್ಟರ್ ಭಾರತಿ ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಜಾರಿಗೊಳಿಸಲಾಗಿದೆ.
ತನಿಖಾಧಿಕಾರಿಯಾಗಿದ್ದ ಉರ್ವ ಇನ್‌ಸ್ಪೆಕ್ಟರ್ ಭಾರತಿ ಅವರು ಸಿಬ್ಬಂದಿ ಜತೆ ಬೆಂಗಳೂರು ವಿವಮಾನ ನಿಲ್ದಾಣದಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದು, ಇನ್‌ಸ್ಪೆಕ್ಟರ್ ಅವರು ತನ್ನ ಪರಿಚಯದ ವ್ಯಕ್ತಿಯ ಮೂಲಕ ವಿಮಾನದ ಟಿಕೆಟ್ ಬುಕ್ ಮಾಡಿಸಿ, ಹಣ ಪಾವತಿಸಿದ್ದು, ಆರೋಪಿಯ ಖರ್ಚಿನಲ್ಲಿ ಪ್ರಯಾಣ ಮಾಡಿಲ್ಲ. ಠಾಣಾ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಸಿದಾಗ ಆರೋಪಿಯನ್ನು ಠಾಣಾ ಬಂಧೀಖಾನೆಯಲ್ಲಿಯೇ ಇರಿಸಿದ್ದು, ವಿಚಾರಣೆ ಸಮಯ ಮಾತ್ರ ಹೊರಗೆ ಕರೆ ತಂದಿದ್ದು, ಯಾವುದೇ ವಿಶೇಷ ಆತಿಥ್ಯ ನೀಡಿಲ್ಲ. ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾಗ ಕಾಲೇಜು ವಿದ್ಯಾರ್ಥಿಗಳು ಠಾಣೆಗೆ ಭೇಟಿ ನೀಡಿದ್ದಾರೆ. ಆದರೆ ಆರೋಪಿ ಸೈಬರ್ ಜಾಗೃತಿ ಮಾಹಿತಿ ನೀಡಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
ಘಟನೆ ವಿವರ: ರಾಜಸ್ಥಾನದ ರಾಜ್ ಕುಮಾರ್ ಮೀನಾ (23) ಹಾಗೂ ಸುಭಾಸ್ ಗುರ್ಜರ್ (27) ಅವರು ಅಮೆಜಾನ್ ಕಂಪನಿಯ ನಿಯಮಗಳನ್ನು ಬಂಡವಾಳ ಮಾಡಿಕೊಂಡು 30 ಕೋಟಿ ರೂ. ಅಧಿಕ ಮೊತ್ತದ ಸಾಮಗ್ರಿ ದೋಚಿದ್ದರು. ಇವರನ್ನು ತಮಿಳುನಾಡಿನ ಸೇಲಂ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳ ವಿರುದ್ಧ ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ನವದೆಹಲಿ, ಉತ್ತರ ಪ್ರದೇಶ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಸೈಬರ್ ವಂಚನೆ ವಿರುದ್ಧ ಪ್ರಕರಣ ದಾಖಲಾಗಿದ್ದವು.
ಮಹೀಂದ್ರ ಲಾಜಿಸ್ಟಿಕ್‌ನ ವಿಜಿಲೆನ್ಸ್ ಅಧಿಕಾರಿಯೊಬ್ಬರು ಉರ್ವ ಪೊಲೀಸ್ ಠಾಣೆಗೆ ಮೋಸದ ಜಾಲದ ಬಗ್ಗೆ ದೂರು ನೀಡಿದ್ದರು. ತಮಿಳುನಾಡಿನ ಸೇಲಂ ಪೊಲೀಸರು ಸೇಲಂನಲ್ಲಿ ರಾಜ್ ಕುಮಾರ್ ಮೀನಾ, ರಾಜಸ್ಥಾನದಲ್ಲಿ ಸುಭಾಸ್ ಗುರ್ಜರ್ ಅವರನ್ನು ಬಂಧಿಸಿದ್ದರು. ಸೇಲಂ ಜೈಲ್‌ನಿಂದ ವಾರಂಟ್ ಮೇಲೆ ಉರ್ವ ಪೊಲೀಸರು ಆರೋಪಿಗಳನ್ನು ಕರೆ ತಂದಿದ್ದರು. ತನಿಖೆಗೆ ಆರೋಪಿಗಳ ಜತೆ ರಾಜಸ್ಥಾನಕ್ಕೆ ತೆರಳಿರುವಾಗ ಪೊಲೀಸ್ ಸೆಲ್ಫಿ ತೆಗೆದಿದ್ದರು. ಆ ಸೆಲ್ಫಿ ತನ್ನ ಉದ್ಯೋಗಕ್ಕೆ ಮುಳುವಾಯಿತು.