ಬೆಕೆನ್ಹ್ಯಾಮ್: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತನ್ನ ಕುಟುಂಬದಲ್ಲಿನ ತುರ್ತು ವೈದ್ಯಕಿಯ ಪರಿಸ್ಥಿತಿಯಿಂದಾಗಿ ಇಂಗ್ಲೆಂಡ್ನಿಂದ ನವದೆಹಲಿಗೆ ವಾಪಸ್ ಆಗಿದ್ದಾರೆ. ಗಂಭೀರ್ ಅನುಪಸ್ಥಿತಿಯಲ್ಲಿ ಭಾರತ ಹಾಗೂ ಭಾರತ ಎ ತಂಡಗಳು ಆಂತರಿಕ ಅಭ್ಯಾಸ ಪಂದ್ಯವನ್ನಾಡಲಿದ್ದು, ಸಹಾಯಕ ಕೋಚ್ ರ್ಯಾನ್ ಟೆನ್ ಡೋಶೆಟ್ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಸೀತಾಂಶು ಕೋಟಕ್ (ಬ್ಯಾಟಿಂಗ್ ಕೋಚ್), ಮಾರ್ನ್ ಮಾರ್ಕೆಲ್ (ಬೌಲಿಂಗ್ ಕೋಚ್), ಟಿ. ದಿಲೀಪ್ (ಫೀಲ್ಡಿಂಗ್ ಕೋಚ್) ತರಬೇತಿ ಬಳಗದ ಇತರ ಸದಸ್ಯರಾಗಿದ್ದಾರೆ.
ಗಂಭೀರ್ ಅವರ ತಾಯಿ ಸೀಮಾ ಗಂಭೀರ್ ಬುಧವಾರ ಹೃದಯಾಘಾತಕ್ಕೆ ಒಳಗಾಗಿದ್ದು, ಸದ್ಯ ನವದೆಹಲಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರವೇ ಭಾರತಕ್ಕೆ ಹಿಂದಿರುಗಿರುವ ಗಂಭೀರ್ ತಾಯಿಯ ಜತೆಯಲ್ಲಿದ್ದು, ಅವರು ಬೇಗನೆ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಜೂನ್ 20ರಿಂದ ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿ ಆರಂಭವಾಗಲಿದ್ದು, ಮೊದಲ ಟೆಸ್ಟ್ಗೆ ಮುನ್ನ ಗಂಭೀರ್ ತಂಡ ಕೂಡಿಕೊಳ್ಳುವ ನಿರೀಕ್ಷೆ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗಂಭೀರ್ ತಂಡ ಸೇರ್ಪಡೆಯಾಗುವ ನಿಖರ ದಿನಾಂಕ ತಿಳಿದುಬಂದಿಲ್ಲ. ಜತೆಗೆ ಅವರ ತಾಯಿಯ ಆರೋಗ್ಯ ಸುಧಾರಣೆಯ ಮೇಲೆ ಇಂಗ್ಲೆಂಡ್ಗೆ ಮರುಪ್ರಯಾಣ ಅವಲಂಬಿತವಾಗಿದೆ ಎನ್ನಲಾಗಿದೆ. ಜೂನ್ 6ರಂದು ಭಾರತದ ಪ್ರಧಾನ ತಂಡದೊಂದಿಗೆ ಗಂಭೀರ್ ಇಂಗ್ಲೆಂಡ್ಗೆ ತೆರಳಿದ್ದರು. ಭಾರತ ಎ ತಂಡಕ್ಕೆ ಹೃಷಿಕೇಶ್ ಕಾನಿಟ್ಕರ್ ಮುಖ್ಯ ಕೋಚ್ ಆಗಿದ್ದಾರೆ.