

Karun Nair: ಇದೇ ಜೂನ್ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಸಜ್ಜಾಗಿದ್ದರೆ, ಅತ್ತ 8 ವರ್ಷಗಳ ಬಳಿಕ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಕನ್ನಡಿಗ ಕರುಣ್ ನಾಯರ್ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಅಮೋಘ ಪ್ರದರ್ಶನ ನೀಡಲು ಎದುರುನೋಡುತ್ತಿರುವ ಕರುಣ್ ನಾಯರ್, ಇತ್ತೀಚಿನ ಸಂದರ್ಶನದಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. "2 ವರ್ಷಗಳ ಹಿಂದೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರೊಬ್ಬರು ನನಗೆ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವಂತೆ ಹೇಳಿದರು. ಇದರೊಂದಿಗೆ ಆರ್ಥಿಕ ಭದ್ರತೆಯ ಸಲುವಾಗಿ ವಿದೇಶಿ ಲೀಗ್ ಮತ್ತು ಫ್ರಾಂಚೈಸಿ ಟಿ20 ಲೀಗ್ಗಳನ್ನು ಆಡುವಂತೆಯೂ ಸಲಹೆ ನೀಡಿದ್ದರು" ಎಂದು ಕರುಣ್ ಹೇಳಿದ್ದಾರೆ.
ಇಲ್ಲಿ ತನಗೆ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವಂತೆ ಹೇಳಿದ ಸ್ಟಾರ್ ಕ್ರಿಕೆಟಿಗ ಯಾರೆಂದು ಕರುಣ್ ಬಿಟ್ಟುಕೊಟ್ಟಿಲ್ಲ. ಅವರೇಳಿದಂತೆ ನಿವೃತ್ತಿ ಮಾತಿಗೆ ತಲೆಕೆಡಿಸಿಕೊಳ್ಳದ ನಾಯರ್, ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ, ಇಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಇದು ಕನ್ನಡಿಗರು ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ನೀಡಿದೆ,(ಏಜೆನ್ಸೀಸ್).