

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೋಮವಾರದಂದು ನಗರದ ವಿವಿಧೆಡೆ ಸಂಚರಿಸಿ ಸ್ವಚ್ಛತೆ ಕೆಲಸವನ್ನು ಪರಿಶೀಲಿಸಿದರು.
ದಾಜಿಬಾನಪೇಟ, ಡಾಕಪ್ಪ ಸರ್ಕಲ್, ಜವಳಿ ಸಾಲ, ಬೆಳಗಾಂವಗಲ್ಲಿ, ಗೌಳಿ ಗಲ್ಲಿ, ಸಿಬಿಟಿ, ಮರಾಠ ಗಲ್ಲಿ, ಬ್ರಾಡವೇ ಹಾಗೂ ದುರ್ಗದ ಬೈಲ್ ಸರ್ಕಲ್ಗಳಲ್ಲಿ ನಡೆಯುತ್ತಿದ್ದ ಸ್ವಚ್ಛತೆ ಕೆಲಸವನ್ನು ವೀಕ್ಷಿಸಿದರು. ಘಂಟಿಕೇರಿ ಬಳಿ ರಸ್ತೆಯ ಅಕ್ಕಪಕ್ಕ ಹಾಕಲಾಗಿದ್ದ ಕಸವನ್ನು ನೋಡಿ ತಕ್ಷಣ ವಿಲೇವಾರಿ ಮಾಡುವಂತೆ ಆರೋಗ್ಯ ನಿರೀಕ್ಷರಿಗೆ ಸೂಚಿಸಿದರು. ಕೆಲವು ಕಡೆ ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು ತಕ್ಷಣ ಫುಟ್ಪಾತ್ ಮೇಲಿನ ಸಾಮಾನುಗಳನ್ನು ಖಾಲಿ ಮಾಡಿಸಿ ಎಚ್ಚರಿಕೆ ನೀಡಿದರು.
ಎಲ್ಲ ಆರೋಗ್ಯ ನಿರೀಕ್ಷಕರು ನಿಯೋಜಿತ ಸ್ಥಳದಲ್ಲಿ ಕರ್ತವ್ಯ ನಿರತರಾಗಿರುವ ಕುರಿತು ಮಾಹಿತಿ ಪಡೆದುಕೊಂಡರು. ನಿತ್ಯ ನಗರ ಸಂಚಾರ ಮಾಡಿ ಸ್ವಚ್ಛತೆಯನ್ನು ಪರಿಶೀಲಿಸಲಾಗುವುದು ಹಾಗೂ ಎಲ್ಲ ಆರೋಗ್ಯ ನಿರೀಕ್ಷಕರು, ವಲಯ ಸಹಾಯಕ ಆಯುಕ್ತರು ಬೆಳಗ್ಗೆ ತಮ್ಮ ವಾರ್ಡ್ಗಳಲ್ಲಿ ಸಂಚರಿಸಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿ ಮಾಹಿತಿ ನೀಡತಕ್ಕದ್ದು. ಸ್ವಚ್ಛತಾ ಕಾರ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರದಂತೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.