ಎಚ್​ಡಿಕೆ-ಸಿಪಿವೈ ಮೇಲಾಟ; ತಹಶೀಲ್ದಾರ್​​ಗಳಿಗೆ ಪೀಕಲಾಟ, ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ವರ್ಗಾವಣೆ ಹುಡುಗಾಟ..

HDK CPY
Published on

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್​ ಅವರ ಪ್ರತಿಷ್ಠೆಯ ಮೇಲಾಟದಿಂದಾಗಿ ಚನ್ನಪಟ್ಟಣದ ತಹಶೀಲ್ದಾರ್​ಗಳಿಗೆ ಪೀಕಲಾಟ ಎಂಬಂತಾಗಿದೆ.

ತಮ್ಮವರೇ ತಹಶೀಲ್ದಾರ್ ಇರಬೇಕು ಎಂಬ ಇವರಿಬ್ಬರ ಜಟಾಪಟಿಯಿಂದಾಗಿ ಮೂರೇ ವಾರಗಳಲ್ಲಿ ಮೇಲಿಂದ ಮೇಲೆ ತಹಶೀಲ್ದಾರ್​ಗಳ ವರ್ಗಾವಣೆ ಆಗಿದ್ದು, ದಿನ ಬೆಳಗಾಗುವುದರೊಳಗೆ ತಹಶೀಲ್ದಾರ್​ ಬದಲಾವಣೆ ಆಗುತ್ತಿರುವಂಥ ಬೆಳವಣಿಗೆಗಳು ಆಗುತ್ತಿವೆ.

ಕೆಲವೇ ದಿನಗಳ ಹಿಂದೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದ ಎಚ್​ಡಿಕೆ ಆಪ್ತ ನಾಗೇಶ್ ಅವರನ್ನು ಸಿಪಿವೈ ವರ್ಗಾವಣೆ ಮಾಡಿಸಿದ್ದರು ಎನ್ನಲಾಗಿದ್ದು, ಆ ಸ್ಥಾನಕ್ಕೆ ಅವರ ಆಪ್ತ ಸುದರ್ಶನ್​ ಅವರನ್ನು ಟ್ರಾನ್ಸ್​ಫರ್ ಆಗಿ ಬಂದಿದ್ದರು.

ಇದರ ಬೆನ್ನಿಗೇ ಮತ್ತೆ ಅಖಾಡಕ್ಕಿಳಿದ ಮಾಜಿ ಸಿಎಂ ಪುನಃ ತಮ್ಮದೇ ಕೈ ಮೇಲು ಎಂಬುದನ್ನು ಸಾಬೀತುಪಡಿಸಿದ್ದಾರೆ ಎನ್ನಲಾಗಿದೆ. ಎರಡೇ ದಿನದಲ್ಲಿ ಸುದರ್ಶನ್ ಅವರನ್ನು ಎತ್ತಂಗಡಿ ಮಾಡಿಸಿಲಾಗಿದ್ದು, ಅಲ್ಲಿಗೆ ಎಚ್​ಡಿಕೆ ಆಪ್ತ ಹರ್ಷವರ್ಧನ್​ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸಿಎಂ ಶಿಫಾರಸಿನೊಂದಿಗೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಜಿ.ಎನ್. ಸುಶೀಲಾ ಅವರು ನಿನ್ನೆ ನಾಗೇಶ್ ಅವರನ್ನು ವರ್ಗಾವಣೆ ಮಾಡಿ ನೂತನ ತಹಶೀಲ್ದಾರ್ ಆಗಿ ಸುದರ್ಶನ್ ಅವರನ್ನು ನೇಮಕ ಮಾಡಿದ್ದರು. ಇಂದು ಸುಶೀಲಾ ಅವರೇ ಸುದರ್ಶನ್ ಅವರನ್ನು ಸ್ಥಾನದಿಂದ ತೆರವುಗೊಳಿಸಿ ಅಲ್ಲಿಗೆ ಹರ್ಷವರ್ಧನ್ ಅವರನ್ನು ವರ್ಗಾವಣೆ ಮಾಡಿದ್ದರು. ಪರಿಣಾಮವಾಗಿ ನಿನ್ನೆ ಸಂಜೆ ತರಾತುರಿಯಲ್ಲಿ ಚನ್ನಪಟ್ಟಣ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದ ಸುದರ್ಶನ್ ಇಂದು ಅಲ್ಲಿಂದ ಎದ್ದುಹೊರಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net